ಸುಳ್ಯ: ಸಂಚಾರಕ್ಕೆ ದುಸ್ತರ ಆಗಿರುವ ಪಡ್ಡಂಬೈಲು – ಕರ್ಲಪ್ಪಾಡಿ – ಕುಡೆಂಬಿ ರಸ್ತೆ ಸಮಸ್ಯೆಯ ಕುರಿತು ಜು.22 ರಂದು ನಡೆದ ಅಜ್ಜಾವರ ಗ್ರಾಮ ಸಭೆಯಲ್ಲಿ ಪ್ರತಿಧ್ವನಿಸಿತು.ಮಳೆಗಾಲದಲ್ಲಿ ಕೆಸರು ಗದ್ದೆಯಾಗುವ ರಸ್ತೆಯು ಸಂಚಾರಕ್ಕೆ ಅಯೋಗ್ಯವಾಗಿರುವ ಕುರಿತು ಜೂನ್ 30ರಂದು ವಿಶೇಷ ವರದಿ ಪ್ರಕಟಿಸಿ ‘ಸುಳ್ಯ ಮಿರರ್’ ಮೊದಲ ಬಾರಿಗೆ
ಬೆಳಕು ಚೆಲ್ಲಿತ್ತು. ‘ಈ ಒಂದು ಕಿ.ಮಿ.ರಸ್ತೆ ಅಭಿವೃದ್ಧಿ ಮಾಡಿ ಕೊಡಿ ಪ್ಲೀಸ್.. ಪಡ್ಡಂಬೈಲು ಕರ್ಲಪ್ಪಾಡಿ ಕುಡೆಂಬಿ ರಸ್ತೆ ಪ್ರಯಾಣ ದೇವರಿಗೇ ಪ್ರೀತಿ..!
ಎಂಬ ಶೀರ್ಷಿಕೆಯಡಿಯಲ್ಲಿ ವರದಿ ಪ್ರಕಟಗೊಂಡಿತ್ತು.
ರಸ್ತೆಯ ಅವ್ಯವಸ್ಥೆಯಿಂದ ಆಗುತ್ತಿರುವ ಸಮಸ್ಯೆ ಕುರಿತು ವರದಿಯಲ್ಲಿ ತಿಳಿಸಲಾಗಿತ್ತು. ಬಳಿಕ ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.
‘ಸುಳ್ಯ ಮಿರರ್’ನಲ್ಲಿ ಪ್ರಕಟಗೊಂಡ ವರದಿ
ಗ್ರಾಮ ಸಭೆಯಲ್ಲಿ ಸ್ಥಳೀಯರಾದ ಶಿವರಾಮ, ಮಿಥುನ್ ಕರ್ಲಪ್ಪಾಡಿ ಮತ್ತಿತರರು ರಸ್ತೆ ಸಮಸ್ತೆ ಕುರಿತು ವಿವರಿಸಿದರು. ಈ ಕುರಿತು ಭಾರೀ ಚರ್ಚೆ ನಡೆಯಿತು. ಸದ್ಯ ರಸ್ತೆಯಲ್ಲಿ ತಾತ್ಕಾಲಿಕ ದುರಸ್ತಿ ಮಾಡುವುದಾಗಿ ಗ್ರಾಮ ಪಂಚಾಯತ್ ಆಡಳಿತ ಭರವಸೆ ನೀಡಿತ್ತು. ಕಾಂತಮಂಗಲ – ದೊಡ್ಡೇರಿ ವಾರ್ಡ್ ಕುಡಿಯುವ ನೀರಿನ ಸಂಪರ್ಕ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಸಾರ್ವಜನಿಕರು ಕೊಡ, ಬಕೆಟ್ ಪ್ರದರ್ಶಿಸಿ ನೀರು ಕೊಡುವಂತೆ ಒತ್ತಾಯಿಸಿದ ಘಟಬೆಯೂ ನಡೆಯಿತು.
ಅಜ್ಜಾವರ ಪಂಚಾಯತ್ ಅಧ್ಯಕ್ಷೆ ಬೇಬಿ ಕಲ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಜಯರಾಮ ಅತ್ಯಡ್ಕ, ಪಂಚಾಯತ್ ಸದಸ್ಯರುಗಳಾದ ಪ್ರಸಾದ್ ರೈ ಮೇನಾಲ, ರವಿರಾಜ್ ಕರ್ಲಪ್ಪಾಡಿ, ದಿವ್ಯ ಪಡ್ಡಂಬೈಲು, ಅಬ್ದುಲ್ಲ ಅಜ್ಜಾವರ, ಶ್ವೇತಕುಮಾರಿ, ವಿಶ್ವನಾಥ ಮುಳ್ಯಮಠ, ರಾಹುಲ್ ಅಡ್ಪಂಗಾಯ, ಸತ್ಯವತಿ ಬಸವನಪಾದೆ, ಗೀತಾ ಕಲ್ಲುಗುಡ್ಡೆ, ಸರೋಜಿನಿ, ದೇವಕಿ, ವಿಶ್ವನಾಥ, ರಾಘವ ಮುಳ್ಯ, ಶಿವಕುಮಾರ್ ಮುಳ್ಯ, ರತ್ನಾವತಿ, ಲೀಲಾ ಮನಮೋಹನ್ ಹಾಗೂ ಅಧಿಕಾರಿಗಳು ಇದ್ದರು.
ಕೃಷಿ ಇಲಾಖೆಯ ಸಹಾಯಕವಾದ ನಿರ್ದೇಶಕ ಗುರುಪ್ರಸಾದ್ ನೋಡೆಲ್ ಅಧಿಕಾರಿಯಾಗಿದ್ದರು.