ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದ ಚುನಾವಣೆಯ ಮತದಾನ ಸೋಮವಾರ ನಡೆಯಲಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಅವರ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. ಮತದಾನದ ಅರ್ಹತೆ ಹೊಂದಿರುವ 9,000ಕ್ಕೂ ಹೆಚ್ಚು ಪ್ರತಿನಿಧಿಗಳಿದ್ದಾರೆ.ಕಾಂಗ್ರೆಸ್ ಕೇಂದ್ರ ಕಚೇರಿ ಮತ್ತು
ಇತರ 65 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಕಾಂಗ್ರೆಸ್ ಪಕ್ಷದ 137 ವರ್ಷಗಳ ಇತಿಹಾಸದಲ್ಲಿ ಆರನೇ ಬಾರಿ ಚುನಾವಣೆ ನಡೆಯುತ್ತಿದೆ. ಮತ ಎಣಿಕೆಯು ಅ.19ರಂದು ನಡೆಯಲಿದೆ. ಖರ್ಗೆ ಅವರಿಗೆ ಪ್ರಮುಖ ಮುಖಂಡರ ಬೆಂಬಲ ಇದೆ. ಹಾಗಾಗಿ, ಖರ್ಗೆ ಅವರು ಗೆಲ್ಲುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಪಕ್ಷದಲ್ಲಿ ಬದಲಾವಣೆ ತರುವುದಕ್ಕಾಗಿ ತಮಗೆ ಮತ ಹಾಕಿ ಎಂದು ತರೂರ್ ಹೇಳಿದ್ದಾರೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಮತ ಚಲಾಯಿಸುವ ನಿರೀಕ್ಷೆ ಇದೆ. ‘ಭಾರತ್ ಜೋಡೊ’ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಅವರು ಕರ್ನಾಟಕದ ಸಂಗನಕಲ್ಲು ಎಂಬಲ್ಲಿ ಮತ ಚಲಾಯಿಸಲಿದ್ದಾರೆ. ಅವರ ಜತೆಗೆ ಯಾತ್ರೆ ಕೈಗೊಂಡಿರುವ ಮತ್ತು ಮತದಾನದ ಅರ್ಹತೆ ಇರುವ ಸುಮಾರು 40 ಮಂದಿಯೂ ಇಲ್ಲಿ ಮತ ಹಾಕಲಿದ್ದಾರೆ.137 ವರ್ಷ ಇತಿಹಾಸವಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆಯು 1939, 1950, 1977, 1997 ಹಾಗೂ 2000ನೇ ಇಸವಿಯಲ್ಲಿ ನಡೆದಿದ್ದವು. ಇದು 6 ನೇ ಬಾರಿಯ ಚುನಾವಣೆಯಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸುದ್ದಿಗಾರರೊಂದಿಗೆ ಹೇಳಿದ್ದಾರೆ.