ಸುಳ್ಯ:ನಮ್ಮ ಪ್ರಕೃತಿಗೆ ಮತ್ತು ಮಣ್ಣಿಗೆ ಅದರದ್ದೇ ಆದ ಗುಣ,ತತ್ವ ಇದೆ. ಆ ಪ್ರಾಕೃತಿಕ ತತ್ವ, ಮಣ್ಣಿನ ಗುಣವನ್ನು ಅರಿತು ಪ್ರಕೃತಿಗೆ ಅನುಗುಣವಾಗಿ ಕೃಷಿ ನಡೆಸಬೇಕು ಎಂದು ಖ್ಯಾತ ಪರಿಸರ ತಜ್ಞ, ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ.ನಾಯರ್ ಹೇಳಿದ್ದಾರೆ. ಸುಳ್ಯದ ಪ್ರಥಮ ಕೃಷಿ ಪರಿಕರಗಳ ಮಳಿಗೆ ಭಾರತ್ ಆಗ್ರೋ ಸರ್ವೀಸಸ್ ಆ್ಯಂಡ್ ಸಪ್ಲೈಸ್ನ ಸುವರ್ಣ ಮಹೋತ್ಸವ ಆಚರಣೆ ‘ಆಗ್ರೋ ‘ಸುವರ್ಣ ಸಂಭ್ರಮ’ ಕಾರ್ಯಕ್ರಮದ ಪ್ರಯುಕ್ತ ನಡೆದ ಆಗ್ರೋ ‘ಕೃಷಿ ಚಿಂತನ’ ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿ ಪ್ರಕೃತಿ-ಯಂತ್ರ-ಬದುಕು ಎಂಬ ವಿಷಯದ ಬಗ್ಗೆ ಮಾತನಾಡಿದರು.ಮಣ್ಣಿನ ಗುಣ, ನೀರಿನ ಲಭ್ಯತೆಯ ಬಗ್ಗೆ ಅಧ್ಯಯನ ನಡೆಸಬೇಕು. ರಾಸಾಯನಿಕವನ್ನು ಬಳಸದೇ ಕೃಷಿ ನಡೆಸಬೇಕು ಎಂದ ಅವರು ರಾಸಾಯನಿಕ ಬಳಸಿದರೆ ಮಣ್ಣಿನ ಜೀವರಾಶಿ ನಾಶವಾಗುತ್ತದೆ.ಮಣ್ಣಿನ ಜೀವರಾಶಿ ಉಳಿದರೆ ಮಾತ್ರ ಭೂಮಿ ಉಳಿಯಲು ಸಾಧ್ಯ ಎಂದು ಅವರು ಹೇಳಿದರು. ಪ್ರಕೃತಿಗೆ ಒಪ್ಪುವಂತಹಾ ಕೃಷಿ ಮಾಡುವುದರ ಜೊತೆಗೆ ಮಿಶ್ರ ಬೆಳೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

ಕೃಷಿ ಚಿಂತನ ಕಾರ್ಯಕ್ರಮದಲ್ಲಿ ನಾಡಿನ ಅನುಭವಿ ಕೃಷಿ ತಜ್ಞರು ಕೃಷಿಯ ಬಗೆಗಿನ ವಿಶೇಷ ಉಪನ್ಯಾಸ ನೀಡಿದರು.
ಟ್ಯಾಂಕ್ಗಳ ಬಳಕೆ, ಮಳೆ ಕೊಯ್ಲು ವಿಷಯದ ಬಗ್ಗೆ ಮುರಳೀಧರ ಭಟ್ ಬಂಗಾರಡ್ಕ ಉಪನ್ಯಾಸ ನೀಡಿದರು.ಕೆಲವು ದಶಕಗಳ ಹಿಂದೆ 20 ಅಡಿ ಆಳದಲ್ಲಿ ಬೋರ್ವೆಲ್ ಕೊರೆದರೆ ಯಥೇಚ್ಛ ನೀರು ಸಿಗುತ್ತಿತ್ತು. ಆದರೆ ಇಂದು 600 ಅಡಿ ಕೊರೆದರೂ ನೀರು ಸಿಗದ ಪರಿಸ್ಥಿತಿ ಇದೆ. ಇದನ್ನು ತಪ್ಪಿಸಲು, ಬೋರ್ವೆಲ್ ಕೊರೆಯುವುದು ಕಡಿಮೆ ಮಾಡಲು
ಮಳೆ ನೀರನ್ನು ಸಂಗ್ರಹಿಸುವುದು ಒಂದೇ ಉಪಾಯ. ಟ್ಯಾಂಕ್ಗಳನ್ನು ನಿರ್ಮಿಸಿ ಮಳೆ ನೀರನ್ನು ಸಂಗ್ರಹಿಸಿ ಅದನ್ನು ಕೃಷಿಗೆ ಬಳಸುವ ಮೂಲಕ ಬೋರ್ವೆಲ್ ಬಳಕೆಯನ್ನು ಕಡಿಮೆ ಮಾಡಬಹುದು ಎಂದು ಹೇಳಿದರು.

ಕನಿಷ್ಠ ನೀರಿನಲ್ಲಿ ಅಡಿಕೆ ಕೃಷಿ ಬಗ್ಗೆ ಪ್ರವೀಣ ಕೇಶವ ಮೈರುಗ ಕುರುಡಪದವು ಮಾತನಾಡಿ ಮಿತವಾಗಿ ನೀರನ್ನು ಬಳಸಿ ಹೆಚ್ಚು ಇಳುವರಿ ಪಡೆಯಬಹುದು ಎಂದು ಹೇಳಿದರು. ಕೃಷಿ ಕ್ಷೇತ್ರದಲ್ಲಿ ಹಾರ್ಡ್ ವರ್ಕ್ಗಿಂತ ಸ್ಮಾರ್ಟ್ ವರ್ಕ್ ಅಗತ್ಯ ಎಂದು ಅವರು ಹೇಳಿದರು.
ಸ್ವಯಂಚಾಲಿತ ನೀರಾವರಿ ವಿಧಾನದ ಬಗ್ಗೆ ಅನಂತ ರಾಮಕೃಷ್ಣ ಪೆರುವಾಯಿ ಮಾತನಾಡಿದರು.

ಭಾರತ್ ಆಗ್ರೋ ಸರ್ವೀಸಸ್ ಆ್ಯಂಡ್ ಸಪ್ಲೈಸ್ನ ಮಾಲಕರಾದ ರಾಮಚಂದ್ರ ಪಿ, ಮಂಜುಳಾ ರಾಮಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಮಚಂದ್ರ ಪಿ ಸ್ವಾಗತಿಸಿ, ಸನತ್.ಪಿ.ಆರ್. ವಂದಿಸಿದರು. ಕೃಷಿಕರಾದ ರಮೇಶ್ ದೇಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.














