ಹಾಂಗ್ಝೌ: ಬಾಂಗ್ಲಾದೇಶ ವಿರುದ್ಧ 9 ವಿಕೆಟ್ ಅಂತರದ ಗೆಲುವು ಸಾಧಿಸಿದ ಭಾರತ ಕ್ರಿಕೆಟ್ ತಂಡವು ಏಷ್ಯನ್ ಗೇಮ್ಸ್ ಟಿ20 ಕ್ರಿಕೆಟ್ ಫೈನಲ್ ಪ್ರವೇಶಿಸಿದೆ.ಹಾಂಗ್ಝೌನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಋತುರಾಜ್ ಗಾಯಕವಾಡ್ ಬೌಲಿಂಗ್ ಆಯ್ದುಕೊಂಡರು. ಬಾಂಗ್ಲಾ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ಗಳನ್ನು ಕಳೆದುಕೊಂಡು 96 ರನ್ ಗಳಿಸಿತು. ಭಾರತ 9.2 ಓವರ್ಗಳಲ್ಲಿ ಒಂದು
ವಿಕೆಟ್ ನಷ್ಟಕ್ಕೆ 97 ರನ್ ಬಾರಿಸಿ ಜಯ ಗಳಿಸಿತು. ಭಾರತದ ಪರ ಸಾಯಿ ಕಿಶೋರ್ ಮೂರು ವಿಕೆಟ್ ಪಡೆದರೆ, ವಾಷಿಂಗ್ಟನ್ ಸುಂದರ್ ಎರಡು ವಿಕೆಟ್ ಉರುಳಿಸಿದರು. ತಿಲಕ್ ವರ್ಮಾ, ರವಿ ಬಿಷ್ಣೋಯಿ ಮತ್ತು ಶಹಬಾಜ್ ಅಹ್ಮದ್ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು. ಬಾಂಗ್ಲಾ ನೀಡಿದ ಸಾಧಾರಣ ಗುರಿ ಎದುರು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು.ಕ್ವಾರ್ಟರ್ಫೈನಲ್ನಲ್ಲಿ ಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್ ಖಾತೆ ತೆರೆಯುವ ಮೊದಲೇ ಔಟಾದರು. ಈ ಹಂತದಲ್ಲಿ ಜೊತೆಯಾದ ನಾಯಕ ಋತುರಾಜ್ ಗಾಯಕ್ವಾಡ್ ಮತ್ತು ತಿಲಕ್ ವರ್ಮಾ ಭರ್ಜರಿ ಬ್ಯಾಟಿಂಗ್ ನಡೆಸಿ ತಂಡದ ಜಯ ಖಾತ್ರಿ ಪಡಿಸಿದರು. ಈ ಜೋಡಿ ಮುರಿಯದ ಎರಡನೇ ವಿಕೆಟ್ ಪಾಲುದಾರಿಕೆಯಲ್ಲಿ 97 ರನ್ ಕಲೆಹಾಕಿತು.
26 ಎಸೆತಗಳನ್ನು ಎದುರಿಸಿದ ಋತುರಾಜ್ 3 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 40 ರನ್ ಗಳಿಸಿದರು. ವರ್ಮಾ 26 ಎಸೆತಗಳಲ್ಲಿ 2 ಬೌಂಡರಿ ಮತ್ತು 6 ಸಿಕ್ಸರ್ ಸಹಿತ 55 ರನ್ ಬಾರಿಸಿ ಮಿಂಚಿದರು. .
ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ಮುಖಾಮುಖಿಯಾಗಲಿವೆ. ಆ ಪಂದ್ಯದಲ್ಲಿ ಗೆದ್ದ ತಂಡ ನಾಳೆ ನಡೆಯುವ ಫೈನಲ್ನಲ್ಲಿ ಭಾರತಕ್ಕೆ ಫೈನಲ್ನಲ್ಲಿ ಎದುರಾಳಿಯಾಗಲಿದೆ.