ಲಾಹೋರ್: ಚಾಂಪಿಯನ್ಸ್ ಟ್ರೋಫಿ ಪಂದ್ಯದ ಇಂದಿನ ನಿರ್ಣಾಯಕ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಅಫ್ಗಾನಿಸ್ತಾನ ರೋಚಕ ಜಯ ಸಾಧಿಸಿದೆ.ಅಫ್ಗಾನಿಸ್ತಾನ ನೀಡಿದ 326 ರನ್ಗಳ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್, 49.5 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು 317 ರನ್ ಗಳಿಸಿತು. ಆ ಮೂಲಕ 8 ರನ್ಗಳ ಅಲ್ಪ ಅಂತರದ ಸೋಲೊಪ್ಪಿಕೊಂಡಿತು.ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ
‘ಬಿ’ ಗುಂಪಿನಿಂದ ಸೆಮಿಫೈನಲ್ ತಲುಪುವ ರೇಸ್ನಲ್ಲಿ ಉಳಿಯಲು ಈ ಪಂದ್ಯದಲ್ಲಿ ಗೆಲ್ಲುವುದು ಎರಡೂ ತಂಡಗಳಿಗೆ ಅನಿವಾರ್ಯವಾಗಿತ್ತು.ಲಾಹೋರ್ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಗಾನಿಸ್ತಾನ, ಇಬ್ರಾಹಿಂ ಜದ್ರಾನ್ ಗಳಿಸಿದ ಭರ್ಜರಿ ಶತಕದ ಬಲದಿಂದ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 325 ರನ್ಗಳಿಸಿತು.146 ಎಸೆತಗಳನ್ನು ಎದುರಿಸಿದ ಜದ್ರಾನ್, 177 ರನ್ ಗಳಿಸಿದರು. ಅವರ ಇನಿಂಗ್ಸ್ನಲ್ಲಿ 12 ಬೌಂಡರಿ ಮತ್ತು 6 ಸಿಕ್ಸರ್ಗಳಿದ್ದವು.
ಬಳಿಕ, ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ಪರ ಜೋ ರೂಟ್, ಸೊಗಸಾದ ಶತಕ ಸಿಡಿಸಿದರು. 111 ಎಸೆತಗಳನ್ನು ಎದುರಿಸಿದ ಅವರು 120 ರನ್ ಗಳಿಸಿದರು. ಆದರೆ, ಉಳಿದವರಿಂದ ಉತ್ತಮ ಸಹಕಾರ ದೊರೆಯದ ಕಾರಣ, ತಮ್ಮ ತಂಡಕ್ಕೆ ಜಯ ತಂದುಕೊಡಲು ಅವರಿಗೆ ಸಾಧ್ಯವಾಗಲಿಲ್ಲ. ಟೂರ್ನಿಯಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಅಫ್ಗಾನಿಸ್ತಾನ ತಂಡಗಳೊಂದಿಗೆ ‘ಬಿ’ ಗುಂಪಿನಲ್ಲಿ ಆಡುತ್ತಿರುವ ಇಂಗ್ಲೆಂಡ್, ಮೊದಲೆರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಹೀಗಾಗಿ, ಸೆಮಿಫೈನಲ್ ರೇಸ್ನಿಂದ ಹೊರಬಿದ್ದಿದೆ.ಪಾಯಿಂಟ್ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿ ಉಳಿಯುವ ತಂಡಗಳು ಮುಂದಿನ ಹಂತಕ್ಕೆ ತಲುಪಲಿವೆ.ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಸೋಲು ಕಂಡಿದ್ದ ಇಂಗ್ಲೆಂಡ್, ಕೊನೇ ಪಂದ್ಯವನ್ನು ದಕ್ಷಿಣ ಆಫ್ರಿಕಾ ಎದುರು ಮಾರ್ಚ್ 1 ರಂದು ಆಡಲಿದೆ.
ಇತ್ತ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಸೋತಿದ್ದ ಅಫ್ಗಾನಿಸ್ತಾನ ಇದೀಗ ಇಂಗ್ಲೆಂಡ್ ಎದುರು ಗೆದ್ದಿರುವುದರಿಂದ, ನಾಕೌಟ್ ರೇಸ್ನಲ್ಲಿ ಉಳಿದುಕೊಂಡಿದೆ. ಫೆಬ್ರುವರಿ 28 ರಂದು ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಲಿದೆ.