ಅಡ್ತಲೆ:ಅರಂತೋಡು ಅಡ್ತಲೆ ಎಲಿಮಲೆ ರಸ್ತೆ ಅಭಿವೃದ್ಧಿಯ ಮುಂದುವರಿದ ಕಾಮಗಾರಿ ಆರಂಭಗೊಂಡಿದೆ. ಅರಂತೋಡು ಎಲಿಮಲೆ ರಸ್ತೆಯಲ್ಲಿ ಒಂದು ಕೋಟಿ ಕಾಮಗಾರಿ ನಡೆದು ಕಾಮಗಾರಿ ಸ್ಥಗಿತಗೊಂಡಿತ್ತು. ಬಳಿಕ ಎರಡು ಕೋಟಿ ಅನುದಾನ ಮಂಜೂರಾಗಿದ್ದರೂ ಕಾಮಗಾರಿ ಆರಂಭಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿಗೆ
ಹೋರಾಟ ನಡೆಸುತ್ತಿರುವ ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆಯು ರಸ್ತೆ ಕಾಮಗಾರಿ ಆರಂಭಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ನೋಟಾ ಅಭಿಯಾನ ಆರಂಭಿಸುವುದಾಗಿ ಘೋಷಿಸಿತ್ತು. ಇದೀಗ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗಿದ್ದು, ನೋಟಾ ಅಭಿಯಾನ ನಿರ್ಧಾರದಿಂದ ಸದ್ಯ ಹಿಂದೆ ಸರಿಯಲಾಗುವುದು. ಊರಿನ ಜನತೆಯ ಹಾಗೂ ರಸ್ತೆ ಫಲಾನುಭವಿಗಳ ಪರವಾಗಿ ವೇದಿಕೆಯು ಆಡಳಿತ ವ್ಯವಸ್ಥೆಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ ತಿಳಿಸಿದ್ದಾರೆ. ನಮ್ಮ ಬೇಡಿಕೆ ಕನಿಷ್ಠ ಅಡ್ತಲೆ ತನಕ ರಸ್ತೆ ಅಭಿವೃದ್ಧಿ. ಮುಂಬರುವ ಚುನಾವಣೆಗೆ ಮೊದಲು ಅಡ್ತಲೆ ತನಕ ರಸ್ತೆ ಅಭಿವೃದ್ಧಿ ಆಗದಿದ್ದಲ್ಲಿ ಅಥವಾ ಆಗುವಂತ ಸನ್ನಿವೇಶಗಳು ಕಂಡು ಬಾರದೇ ಇದ್ದಲ್ಲಿ ವೇದಿಕೆಯ ನೇತೃತ್ವದಲ್ಲಿ ಸಾರ್ವಜನಿಕರ ಸಭೆ ಕರೆದು, ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹರಿಪ್ರಸಾದ್ ಅಡ್ತಲೆ ತಿಳಿಸಿದ್ದಾರೆ.