ಸುಳ್ಯ: ಚಿರತೆಯ ಚಲನ ವಲನ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ ಪ್ರದೇಶದಲ್ಲಿ ಅರಣ್ಯ ಇಲಾಖೆ ವತಿಯಿಂದ ಚಿರತೆಯನ್ನು ಹಿಡಿಯಲು ಬೋನು ಇರಿಸಲಾಗಿದೆ. ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಅಡ್ಕಬಳೆಯಲ್ಲಿ ಅರಣ್ಯದಂಚಿನ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಇದೆ ಎಂದು

ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಇಲ್ಲಿ ಬೋನು ಇರಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ ಮಾಡಿದ ಘಟನೆ ನಡೆದಿತ್ತು. ಆಡನ್ನು ಕೊಂದು ಅರ್ಧ ತಿಂದ ನೆಲೆಯಲ್ಲಿ ಆಡಿನ ಮೃತದೇಹ ಪತ್ತೆಯಾಗಿತ್ತು. ಕರುವಿನ ಮೇಲೆ ಚಿರತೆ ದಾಳಿ ಮಾಡಿತ್ತು.ಇದು ಚಿರತೆ ಉಪಟಳ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ನೇತೃತ್ವದಲ್ಲಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ನಿತಿನ್ ಪ್ರಭು ಅವರು ಕೂಡ ಪರಿಶೀಲನೆ ನಡೆಸಿದ್ದರು. ಅರಣ್ಯ ಇಲಾಖೆ ಅಡ್ಕಬಳೆಯಲ್ಲಿ ಚಿರತೆ ಬಂದ ಪ್ರದೇಶದಲ್ಲಿ ತಪಾಸಣೆ ನಡೆಸಿದ ಬಳಿಕ ಕಬ್ಬಿಣದ ಬೋನ್ ಇರಿಸಿದ್ದಾರೆ.






