ಬೆಂಗಳೂರು: ಸೂರ್ಯನ ಅಧ್ಯಯನಕ್ಕಾಗಿ ಕಳುಹಿಸಿರುವ ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆ ಸುಸ್ಥಿತಿಯಲ್ಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸೋಧನಾ ಸಂಸ್ಥೆ (ಇಸ್ರೊ) ಭಾನುವಾರ ತಿಳಿಸಿದೆ.
ಭಾರತದ ಮಹತ್ವಾಕಾಂಕ್ಷೆಯ ಆದಿತ್ಯ ಎಲ್-1 ಯೋಜನೆ ಕುರಿತು ಇಸ್ರೊ ಮಾಹಿತಿ ನೀಡಿದ್ದು, ನೌಕೆಯು ನಿಗದಿತ ಪಥದಲ್ಲೇ ಸಂಚರಿಸುವಂತೆ
ಮಾಡುವ ಪಥ ಸರಿಪಡಿಸುವಿಕೆ ಕಾರ್ಯ ಯಶಸ್ವಿಯಾಗಿ ನೆರವೇರಿದೆ ಎಂದು ಹೇಳಿದೆ. ಆದಿತ್ಯ ಎಲ್1 ನೌಕೆ ನಿಗದಿತ ಪಥದಲ್ಲೇ ಸಂಚರಿಸುತ್ತಿದೆ ಎಂದು ಇಸ್ರೊ ತಿಳಿಸಿದೆ.
ಸೆಪ್ಟೆಂಬರ್ 2ರಂದು ಸೂರ್ಯನ ಅಧ್ಯಯನದ ಉದ್ದೇಶದ ಭಾರತದ ಮಹತ್ವಾಕಾಂಕ್ಷೆಯ ಆದಿತ್ಯ ಎಲ್1 ಬಾಹ್ಯಾಕಾಶ ನೌಕೆಯನ್ನು ಹೊತ್ತ ಪಿಎಸ್ಎಲ್ವಿ ರಾಕೆಟ್ ಅನ್ನು ಶ್ರೀಹರಿಕೋಟದಿಂದ ಯಶಸ್ವಿಯಾಗಿ ಉಡ್ಡಯನ ಮಾಡಲಾಗಿತ್ತು. ಭೂಮಿಯಿಂದ 15 ಲಕ್ಷ ಕಿ.ಮೀ. ದೂರದಲ್ಲಿರುವ ಲಗ್ರಾಂಜಿಯನ್ ಬಿಂದುವಿನಲ್ಲಿ ಆದಿತ್ಯ ಎಲ್-1 ಅಂತರಿಕ್ಷ ವೀಕ್ಷಣಾಲಯವನ್ನು ಇರಿಸಲಾಗುವುದು. 125 ದಿನಗಳಲ್ಲಿ ಎಲ್-1 ಬಿಂದುವಿಗೆ ಸೇರಿಸಲಾಗುತ್ತದೆ.