ಬೆಂಗಳೂರು: ಮಳೆ ಹೆಚ್ಚಾಗಿರುವ ಕಾರಣ ಸುಳ್ಯ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಡಿಕೆ ಕೊಳೆ ರೋಗ ಹಾಗೂ ಶಿಲೀಂದ್ರ ರೋಗ ಹರಡುವ ಭೀತಿ ಉಂಟಾಗಿದ್ದು ಇದರ ನಿಯಂತ್ರಣಕ್ಕೆ ಕೃಷಿಕರಿಗೆ ಸರಕಾರ ಧನ ಸಹಾಯ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ವಿಧಾನ ಪರಿಷತ್ನಲ್ಲಿ ಒತ್ತಾಯಿಸಿದ್ದಾರೆ.ಈ ವರ್ಷ ಕಳೆದ
15-20 ದಿನಗಳಿಂದ ಮಳೆ ತೀವ್ರ ಹೆಚ್ಚಾಗಿದೆ. ವಾತಾವರಣದ ತಾಪಮಾನವೂ 18 ರಿಂದ 22 ಡಿಗ್ರಿ ಸೆ. ಆಸುಪಾಸಿನಲ್ಲಿದೆ. ಜೊತೆಗೆ ಆದ್ರ್ರತೆ ಶೇ.85-90 ರಷ್ಟು ಇರುವುದು ಕೊಳೆ ರೋಗಕ್ಕೆ ಕಾರಣವಾಗುವ ಶಿಲೀಂದ್ರ ಕ್ಷಿಪ್ರವಾಗಿ ಬೆಳವಣಿಗೆ ಮತ್ತು ಪ್ರಸಾರಗೊಳ್ಳುವುದಕ್ಕೆ ಪೂರಕ ಪರಿಸ್ಥಿತಿ ಸೃಷ್ಟಿಸಿದೆ. ಇದು ಕೊಳೆರೋಗದ ಭೀತಿ ಹೆಚ್ಚಾಗಲು ಕಾರಣವಾಗಿದೆ.
ಈ ಬಾರಿ ಹವಾಮಾನ ಬದಲಾವಣೆಯಂತಹ ಕಾರಣಗಳಿಂದಾಗಿ ಕೊಳೆರೋಗವಲ್ಲದೆ ಅಡಿಕೆ ನಳ್ಳಿ ಹಂತದಲ್ಲೇ ಉದುರತೊಡಗಿರುವುದು ಕೂಡ ಕಳವಳ ಸೃಷ್ಟಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಸುಬ್ರಮಣ್ಯ. ಪುತ್ತೂರು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಅಲ್ಲದೇ ಇತರೆ ಭಾಗದ ಆಸುಪಾಸಿನ ಘಟ್ಟದ ತಪ್ಪಲಿನಲ್ಲಿರುವ ರೈತರು ಹವಾಮಾನ ಬದಲಾವಣೆಯಿಂದಾಗಿ ಆಗಿರುವ ಈ ಪರಿಣಾಮವನ್ನು ಎದುರಿಸುತ್ತಿದ್ದಾರೆ. ಸಾಮಾನ್ಯವಾಗಿ ಅಡಿಕೆಗೆ ಎಪ್ರಿಲ್-ಮೇ ತಿಂಗಳಲ್ಲಿ ಮಳೆ ಬಂದರೆ ಉತ್ತಮ ಬೆಳೆವಣಿಗೆಯಾಗುತ್ತದೆ. ಆದರೆ ಆ ಮಳೆ ಬಾರದೆ ಹೋದರೆ ಬಿಸಿಲಿನ ಝಳಕ್ಕೆ ಅತ್ತ ಬೆಳೆವಣೆಗೆಯೂ ಆಗದ, ಇತ್ತ ಎಳೆಯೂ ಅಲ್ಲದ ಅಡಿಕೆಗಳು ನಳ್ಳಿ ಹಂತದಲ್ಲಿಯೇ ಬೀಳತೊಡಗುತ್ತದೆ. ಈ ರೋಗ ಮತ್ತು ನಳ್ಳಿ ಹಂತದಲ್ಲಿ ಉದುರತೊಡಗಿರುವ ಅಂಶವನ್ನು ಗಮನಿಸಿ. ಈ ಬಗ್ಗೆ ತೋಟಗಾರಿಕೆ ಮಾತ್ರವಲ್ಲ ಸರ್ಕಾರವು ಕೂಡ ಕೊಳೆರೋಗ ನಿಯಂತ್ರಿಸಲು ರೈತರಿಗೆ ಕನಿಷ್ಠ ರೂ.50 ಕೋಟಿ ಬಿಡುಗಡೆ ಮಾಡಿ ರೈತರಿಗೆ ಸಹಾಯ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.