ಸುಳ್ಯ:ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಹಾಗೂ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಇತರ ಶಿಕ್ಷಣ ಸಂಸ್ಥೆಗಳಲ್ಲಿ ಖಾಯಂ ಉಪನ್ಯಾಸಕರ ಸಮಸ್ಯೆ ಹಾಗೂ ಇತರ ಮೂಲಭೂತ ಸೌಕರ್ಯದ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿ ಎಬಿವಿಪಿ ವತಿಯಿಂದ ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ರಾಜ್ಯದಲ್ಲಿನ
460ಕ್ಕೂ ಹೆಚ್ಚಿನ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ಕೊರತೆ ಇರುವುದು. ಇದರ ಪರಿಣಾಮ ವಿದ್ಯಾರ್ಥಿಗಳಿಗೆ ಸಮರ್ಪಕ ತರಗತಿ ನಡೆಯದಿರುವುದು ಕಳೆದ ಹಲವಾರು ವರ್ಷಗಳಿಂದ ಇರುವ ಗಂಭೀರ ಸಮಸ್ಯೆಯಾಗಿದೆ.ಈ ಸಮಸ್ಯೆಗೆ ಪರಿಹಾರವಾಗಿ ಕಾಯಂ ಉಪನ್ಯಾಸಕರ ಬದಲು ಸರ್ಕಾರ ಪ್ರತಿ ವರ್ಷ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡುತಿದೆ. ಆದರೆ ಅತಿಥಿ ಉಪನ್ಯಾಸಕರ ನೇಮಕದಲ್ಲಿಯೂ
ವಿಳಂಬವಾಗಿದೆ. ಪ್ರಸಕ್ತಶೈಕ್ಷಣಿಕ ಸಾಲಿನಲ್ಲಿ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ತರಗತಿಗಳು ಶುರುವಾಗಿ 50 ದಿನಗಳು ಕಳೆದ ನಂತರ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಿ ಆದೇಶ ಮಾಡಿದೆ. ಇದರಿಂದ ವಿದ್ಯಾರ್ಥಿಗಳಿಗೆ ತರಗತಿ ನಷ್ಟ ಆಗುತಿದೆ. ಆದ್ದರಿಂದ ಸರ್ಕಾರ ಕಾಯಂ ಉಪನ್ಯಾಸಕರ ನೇಮಕಾತಿಗೆ ಆದ್ಯತೆ ನೀಡಬೇಕೆಂದು ಪ್ರತಿಭಟನೆಯಲ್ಲಿ ಮಾತನಾಡಿದ ಪ್ರಮುಖರು ಒತ್ತಾಯಿಸಿದರು.
ಪದವಿ ಹಾಗೂ ಸ್ನಾತಕೋತರ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡುವ ವಿಚಾರದ ಕುರಿತಾಗಿ ಸರ್ಕಾರ ಹಾಗೂ ವಿಶ್ವವಿದ್ಯಾಲಯಗಳು ಸ್ಪಷ್ಟ ನಿಲುವಿನ ತೆಗೆದುಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳಿಗೆ ಉಂಟಾಗುವ ಇನ್ನಿತರ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕು. ಅನುದಾನ ಸಮಸ್ಯೆ, ಮೂಲಭೂತ ಸೌಕರ್ಯಗಳ ಸಮಸ್ಯೆ ಪೀಠೋಪಕರಣಗಳ ಕೊರತೆ, ಪ್ರಾಯೋಗಿಕ ಉಪಕರಣಗಳ ಕೊರತೆ ಮತ್ತಿತರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಎ.ಬಿ.ವಿ.ಪಿ. ನಗರಾಧ್ಯಕ್ಷ ಕುಲದೀಪ್ ಪೆಲತಡ್ಕ,
ತಾಲೂಕು ಎ.ಬಿ.ವಿ.ಪಿ. ಸಂಚಾಲಕ ನಂದಕುಮಾರ್ ಐವರ್ನಾಡು, ಎನ್ನೆಂಸಿ ಎಬಿವಿಪಿ ಅಧ್ಯಕ್ಷ ಪುನೀತ್ ಹುಲಿಮನೆ, ಉಪಾಧ್ಯಕ್ಷ ಜಶ್ವಂತ್, ಪ್ರೀತೇಶ್ ಕಣೆಮರಡ್ಕ, ಆದಿತ್ಯನ್ ಕದಿಕಡ್ಕ , ಭರತ್ ಅಡ್ಕಾರು, ಆಕಾಶ್ ಗರುಗುಂಜ, ದೇವಿಪ್ರಸಾದ್ ಚೆಂಬು, ರೊಹನ್ ಗುತ್ತಿಗಾರು, ಚರಣ್ ರಾಜ್ ದೊಡ್ಡತೋಟ, ಮಿಥುನ್ ತೊಡಿಕಾನ, ಸುದರ್ಶನ ಕಲ್ಲುಗುಂಡಿ, ಮೋನೀಶ್ ಪೆರಾಜೆ, ಶಬರೀಶ್ ಸುಳ್ಯ, ಸರ್ವೇಶ್ ಮತ್ತಿತರರು ಇದ್ದರು.
ಬಳಿಕ ತಹಶೀಲ್ದಾರ್ ಮೂಲಕ ವಿವಿಧ ಬೇಡಿಕೆಗಳ ಮನವಿಯನ್ನು ಸರಕಾರಕ್ಕೆ ಸಲ್ಲಿಸಲಾಯಿತು.