ಮುಂಬೈ:ಭಾರತದ ಜನಪ್ರಿಯ ಗಾಯಕಿ ಆಶಾ ಭೋಸ್ಲೆ (92) ಅವರು ಭಾನುವಾರ ನಿಧನರಾದರು ಅವರಿಗೆ 92 ವರ್ಷವಾಗಿತ್ತು.ಅಸೌಖ್ಯದಿಂದ ಅವರು ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದರು.
ಎಂಟು ದಶಕಗಳಿಗೂ ಹೆಚ್ಚು ಕಾಲ ವೃತ್ತಿಜೀವನವನ್ನು ಹೊಂದಿದ್ದ ಆಶಾ ಭೋಸ್ಲೆ, ವಿವಿಧ ಭಾರತೀಯ ಭಾಷೆಗಳಲ್ಲಿ 12 ಸಾವಿರಕ್ಕೂ ಅಧಿಕ
ಹಾಡುಗಳನ್ನು ಹಾಡಿದ್ದಾರೆ. ವಿಶಿಷ್ಟ ಧ್ವನಿ ಹಾಗೂ ವಿಭಿನ್ನ ಗಾಯನ ಶೈಲಿಯಿಂದಲೇ ಹೆಸರುವಾಸಿಯಾಗಿದ್ದರು. ಅವರಿಗೆ ಪದ್ಮ ವಿಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ. ಅತ್ಯಧಿಕ ರೆಕಾರ್ಡಿಂಗ್ ಹಾಡುಗಳ ಒಡತಿ ಎಂಬ ಗಿನ್ನಿಸ್ ದಾಖಲೆಯನ್ನೂ ಬರೆದಿದ್ದರು. ಅವರ ಅತ್ಯಂತ ಜನಪ್ರಿಯ
ಹಾಡುಗಳಲ್ಲಿ ‘ಅಭಿ ನಾ ಜಾವೋ ಛೋಡ್ ಕರ್’, ‘ಇನ್ ಆಂಖೋನ್ ಕಿ ಮಸ್ತಿ’, ‘ದಿಲ್ ಚೀಜ್ ಕ್ಯಾ ಹೈ’, ‘ಪಿಯಾ ತೂ ಅಬ್ ತೋ ಆಜಾ’, ‘ದುನಿಯಾ ಮೇ ಲೋಗೋನ್ ಕೋ’ ಮತ್ತು ‘ಜರಾ ಸಾ ಝೂಮ್ ಲೂನ್ ಮೈ’ ಸೇರಿದಂತೆ ಹಲವು ಹಾಡುಗಳು ಸೇರಿವೆ. ಮೀನಾ ಕುಮಾರಿ, ಮಧುಬಾಲಾ, ಝೀನತ್ ಅಮಾನ್ ಅವರಿಂದ ಹಿಡಿದು ಕಾಜೋಲ್, ಊರ್ಮಿಳಾ ಮಾತೋಂಡ್ಕರ್ ಮತ್ತು ದಕ್ಷಿಣದ ನಟಿಯರಾದ ಪದ್ಮಿನಿ ಮತ್ತು ವೈಜಯಂತಿಮಾಲಾ ಅವರವರೆಗೆ ಅನೇಕ ಖ್ಯಾತ ನಟಿಯರಿಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ.ಇವರು ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಕಿರಿಯ ತಂಗಿಯಾಗಿದ್ದಾರೆ.














