ಸುಳ್ಯ:ಸುಳ್ಯದ ಹಿರಿಯ ವಕೀಲರು ಹಾಗೂ ಸುಳ್ಯ ನಗರ ಪಂಚಾಯತ್ನ ಮಾಜಿ ಅಧ್ಯಕ್ಷರಾದ ಎಂ.ವೆಂಕಪ್ಪ ಗೌಡ ಅವರು ಸುಳ್ಯದ ಅಂಬಟೆಡ್ಕದಲ್ಲಿ ನೂತನವಾಗಿ ನಿರ್ಮಿಸಿದ ಆರೋಹಿ ಎನ್ಕ್ಲೇವ್ ಸಂಕೀರ್ಣದ ಉದ್ಘಾಟನೆ ಹಾಗೂ ಎಂ.ವೆಂಕಪ್ಪ ಗೌಡ ಹಾಗೂ ಚಂಪಾ ವೆಂಕಪ್ಪ ಗೌಡ ಅವರ ನೂತನ ವಕೀಲರ ಕಚೇರಿ ಉದ್ಘಾಟನಾ ಕಾರ್ಯಕ್ರಮ ನ.8ರಂದು ನಡೆಯಿತು.ಎಂ.ವೆಂಕಪ್ಪ ಗೌಡರ ಸಹೋದರ ಪೆರ್ಗಡೆ ಗೌಡರು ಹಾಗೂ ಚಂಪಾ ವೆಂಕಪ್ಪ ಗೌಡರ ತಂದೆ ಪುಂಗವ ಗೌಡರು ನೂತನ
ಸಂಕೀರ್ಣವನ್ನು ಉದ್ಘಾಟಿಸಿದರು. ಜಿಲ್ಲಾ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ರಾಮಚಂದ್ರ ಅವರು ದೀಪ ಬೆಳಗಿಸಿ ಕಚೇರಿ ಉದ್ಘಾಟಿಸಿದರು.ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ವಹಿಸಿದ್ದರು.

ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕಿ ಭಾಗೀರಥಿ ಮುರುಳ್ಯ,ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಮಂಡಳಿಯ ಸಲಹಾ ಸಮಿತಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ತಹಶೀಲ್ದಾರ್ ಮಂಜುಳಾ, ನ.ಪಂ. ಮಾಜಿ ಅಧ್ಯಕ್ಷೆ ಶಶಿಕಲಾ ಎ. ನೀರಬಿದಿರೆ, ಸುಳ್ಯ ಎನ್ನೆಂಸಿ ನಿವೃತ್ತ ಪ್ರಾಂಶುಪಾಲ ಪ್ರೊ. ದಾಮೋದರ ಗೌಡ ಕೆ.ವಿ., ಕಲ್ಕುಡ ದೈವಸ್ಥಾನದ ಅಧ್ಯಕ್ಷ ಪಿ.ಕೆ. ಉಮೇಶ್, ಉದ್ಯಮಿ ನಂದಕುಮಾರ್ ಮಡಿಕೇರಿ, ಲಯನ್ಸ್ ಮಾಜಿ ಗನರ್ವರ್ ಎಂ.ಬಿ.ಸದಾಶಿವ, ನಾಗಭೂಷಣ್ ಗುರೂಜಿ, ಕಟ್ಟಡದ ಇಂಜಿನಿಯರ್ ವಿಜಯಕುಮಾರ್ ತುದಿಯಡ್ಕ ಶುಭಹಾರೈಸಿದರು. ಚಂಪಾ ವಿ ಗೌಡ, ಮನ್ಜೀತ್ಎಂ. ಗೌಡ ಉಪಸ್ಥಿತರಿದ್ದರು.

ಮಾಜಿ ಸಚಿವ ಬಿ.ರಮಾನಾಥ ರೈ ಸೇರಿದಂತೆ ಸಾವಿರಾರು ಮಂದಿ ಆಗಮಿಸಿ ಶುಭಾಶಯ ಕೋರಿದರು. ಎಂ.ವೆಂಕಪ್ಪ ಗೌಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಹರ್ಷಿತ್ ಮರ್ಕಂಜ ಕಾರ್ಯಕ್ರಮ ನಿರೂಪಿಸಿದರು.
ನಾಲ್ಕಂತಸ್ತಿನ ಆರೋಹಿ ಎನ್ಕ್ಲೇವ್ ಸಂಕೀರ್ಣದಲ್ಲಿ ನೆಲ ಮಹದಿಯಲ್ಲಿ ವಾಣಿಜ್ಯ ಸಂಕೀರ್ಣ, ಎರಡನೇ ಮಹಡಿಯಲ್ಲಿ ವೆಂಕಪ್ಪ ಗೌಡರ ವಕೀಲರ ಕಚೇರಿ ಹಿಂಬದಿಯಲ್ಲಿ ಹಾಗೂ ಮೂರನೇ ಮಹಡಿಯಲ್ಲಿ ಬಾಡಿಗೆ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಮೇಲಂತಸ್ತಿನಲ್ಲಿ ಸಭಾ ಭವನ ನಿರ್ಮಿಸಲಾಗಿದೆ.














