ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಆರೋಗ್ಯ ಇಲಾಖೆಯ ವಿವಿಧ ಯೋಜನೆಗಳ ಕುರಿತಾಗಿ ಜಾಗೃತಿ ಮೂಡಿಸುವ ಆರೋಗ್ಯ ಅರಿವು ಬೀದಿನಾಟಕವು ಸುಳ್ಯ ತಾಲೂಕಿನ ವಿವಿಧೆಡೆಗಳಲ್ಲಿ ಪ್ರದರ್ಶನಗೊಂಡಿತು. ರಂಗ ನಿರ್ದೇಶಕ ಮೌನೇಶ ವಿಶ್ವಕರ್ಮ ರವರ ನೇತೃತ್ವದ ಸಂಸಾರ ಜೋಡುಮಾರ್ಗ ತಂಡ ಬೀದಿನಾಟಕವನ್ನು ಪ್ರದರ್ಶಿಸಿದ್ದು, ಹಾಡು ಕುಣಿತಗಳ ಮೂಲಕವೂ
ಜಾಗೃತಿ ಮೂಡಿಸಿದರು. ಗರ್ಭಿಣಿ ಆರೈಕೆ, ತಾಯಿ ಮಗು ಆರೋಗ್ಯ, ತಾಯಿ ಕಾರ್ಡ್ , ಶ್ರವಣ ದೋಷ, ಪೌಷ್ಠಿಕ ಆಹಾರ, ರಕ್ತಹೀನತೆ, ಆರೋಗ್ಯ ರಕ್ಷಾ 108, ನಗುಮಗು ಅಂಬ್ಯುಲೆನ್ಸ್, ಮಾನಸಿಕ ಆರೋಗ್ಯ, ಸ್ನೇಹ ಕ್ಲಿನಿಕ್, ಕ್ಷಯ ರೋಗ, ಸಾಂಕ್ರಾಮಿಕ ರೋಗ ಕೊರೋನಾ, ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯಾ, ಸೊಳ್ಳೆ ನಿಯಂತ್ರಣದ ಕುರಿತು ಜಾಗೃತಿ, ಅಸಾಂಕ್ರಾಮಿಕ ರೋಗಗಳಾದ ಮಧುಮೇಹ, ರಕ್ತದೊತ್ತಡ, ಪಾರ್ಶ್ವವಾಯು, ಕ್ಯಾನ್ಸರ್, ಹೃದಯ ಸಂಬಂಧಿ ರೋಗ ಗಳ , ಆಯುಷ್ಮಾನ್ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ನ ಉಪಯೋಗ ಹಾಗೂ ಆಯೋಡಿನ್ ಕೊರತೆಯಿಂದಾಗುವ ಅಪಾಯಗಳನ್ನು ಮನಮುಟ್ಟುವ ರೀತಿಯಲ್ಲಿ ತಿಳಿಸಲಾಯಿತು.

ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ಅವರ ಮಾರ್ಗದರ್ಶನದಲ್ಲಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ ಅವರ ನೇತೃತ್ವದಲ್ಲಿ ಗುತ್ತಿಗಾರು, ಕೊಲ್ಲಮೊಗರು, ಆರಂತೋಡು, ಬೆಳ್ಳಾರೆ, ಬಾಳಿಲ, ಎಡಮಂಗಲ, ಬಳ್ಪ, ಸುಬ್ರಹ್ಮಣ್ಯ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ವ್ಯಾಪ್ತಿಯಲ್ಲಿ ಸಂಸಾರ ತಂಡ ಬೀದಿನಾಟಕಗಳನ್ನು ಪ್ರದರ್ಶಿಸಿತು. ತಂಡದಲ್ಲಿ ಮೌನೇಶ ವಿಶ್ವಕರ್ಮ, ಪೃಥ್ವಿರಾಜ್ ಕೊಕ್ಕಪುಣಿ, ವಿಷ್ಣುಗುಪ್ತ ಪುಣಚ, ಚಂದ್ರಮೌಳಿ, ಅನಿತಾ ಮಿನೇಜಸ್, ಮೇಘಾ, ದಿವ್ಯಶ್ರೀ ಭಾಗವಹಿಸಿದ್ದರು.














