ಸುಳ್ಯ:ಸುಳ್ಯ ನಗರ ಸಮೀಪ ಅರಂಬೂರಿನಿಂದ ಪೆರಾಜೆ ತನಕ ವ್ಯಾಪಕವಾಗಿರುವ ಕಾಡಾನೆ ಹಾವಳಿ ಹಾಗೂ ತಾಲೂಕಿನಾದ್ಯಂತ ಹೆಚ್ಚಾಗಿರುವ ಆನೆ ಉಪಟಳ ತಡೆ ಕುರಿತು ಚರ್ಚಿಸಲು ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.ತಾಲೂಕು ಪಂಚಾಯತ್ನ ಶಾಸಕರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು, ಪ್ರಮುಖರು ಭಾಗವಹಿಸಿದ್ದರು. ಪೂಮಲೆ ಕಾಡಿನಿಂದ ಬರುವ ಆನೆಗಳ ಹಿಂಡು ಅರಂಬೂರಿನಿಂದ
ಪೆರಾಜೆ ತನಕ ವ್ಯಾಪಕವಾಗಿ ಹಾನಿ ಮಾಡಿದೆ. 9 ಆನೆಗಳ ಹಿಂಡು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಕಾಣಿಸಿಕೊಂಡು ಭೀತಿ ಹುಟ್ಟಿಸುತ್ತಿವೆ. ಅಲ್ಲದೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಆನೆ ಹಾವಳಿ ಹೆಚ್ಚಾಗಿರುವ ಕುರಿತು ಚರ್ಚೆ ನಡೆಯಿತು.ಆನೆ ಹಾವಳಿ ತಡೆಗೆ ಹೆಚ್ಚು ಆನೆ ಕಂದಕ ನಿರ್ಮಾಣ ಮಾಡಬೇಕು, ಸೋಲಾರ್ ಬೇಲಿ ನಿರ್ಮಾಣಕ್ಕೆ ಸಹಾಯಧನ ಹೆಚ್ಚಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.ಆನೆ ಕಂದಕದ ಜೊತೆಗೆ ಅಲ್ಲಲ್ಲಿ ಕಾಂಕ್ರೀಟ್ ಸ್ಲಾಬ್ಗಳ ನಿರ್ಮಾಣ ಮಾಡಬೇಕು ಎಂದು ಸೂಚಿಸಲಾಯಿತು.
ಸೋಲಾರ್ ಬೇಲಿ ನಿರ್ಮಾಣಕ್ಕೆ ಈಗ ರೈತರಿಗೆ ಶೇ.50ರಷ್ಟು ಸಹಾಯ ಧನ ನೀಡುತ್ತಿದ್ದು ಅದನ್ನು ಹೆಚ್ಚಿಸಿ ಶೇ.75ರಷ್ಟು ಸಹಾಯ ಧನ ನೀಡಬೇಕು ಎಂದು ಆಗ್ರಹಿಸಲಾಯಿತು.ಕಂದಕ ನಿರ್ಮಾಣಕ್ಕೆ ಹೆಚ್ಚು ಅನುದಾನ ನೀಡಬೇಕು, ಸೋಲಾರ್ ಬೇಲಿ ನಿರ್ಮಾಣಕ್ಕೆ ಸಹಾಯಧನ ಹೆಚ್ಚಿಸಬೇಕು ಎಂಬ ಬೇಡಿಕೆ ಮುಂದಿರಿಸಿ ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಹಾಗೂ ಕೃಷಿಕರಾದ ಪಿ.ಬಿ.ಪ್ರಭಾಕರ ರೈ ನೇತೃತ್ವದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರ ಮೂಲಕ ನಿಯೋಗ ತೆರಳಿ ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಸಂಬಂಧಪಟ್ಟವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪೈ, ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್, ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಸುಬೋಧ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ, ಪಿ.ಬಿ.ಪ್ರಭಾಕರ ರೈ, ಸುಧಾಕರ ಎ.ಜಿ, ಜಗದೀಶ್ ಸರಳಿಕುಂಜ, ಉಮಾಶಂಕರ ಎ.ಜಿ, ಚಿನ್ನಪ್ಪ ಚಿಟ್ಟನ್ನೂರ್, ನಾರಾಯಣ ಎಂ.ಎಲ್, ಶಾಸಕರಾದ ಆಪ್ತ ಕಾರ್ಯದರ್ಶಿಗಳಾದ ಹರೀಶ್, ಪ್ರಸಾಸ್ ಕಾಟೂರು, ಧೀರೇಶ್ ನಡುಬೈಲು ಮತ್ತಿತರರು ಉಪಸ್ಥಿತರಿದ್ದರು.





