ಬೆಂಗಳೂರು:ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಮಾನವ – ಕಾಡು ಪ್ರಾಣಿ ಸಂಘರ್ಷ ತಡೆಯಲು ಶಾಶ್ವತ ಕ್ರಮವನ್ನು ಕೈಗೊಂಡು ಈ ಭಾಗದ ಜನರ ಬಹುಮುಖ್ಯ ಸಮಸ್ಯೆಯನ್ನು ಪರಿಹರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ವಿಧಾನ ಪರಿಷತ್ನಲ್ಲಿ ಒತ್ತಾಯಿಸಿದ್ದಾರೆ.
ವಿಧಾನಪರಿಷತ್ತಿನ ಮುಂಗಾರು ಅಧಿವೇಶನದಲ್ಲಿ
ಚುಕ್ಕೆ ಗುರುತಿನ ಪ್ರಶ್ನೆಯಲ್ಲಿ ಅರಣ್ಯ ಸಚಿವ ಶ್ರೀ ಈಶ್ವರ್ ಖಂಡ್ರೆ ಅವರಲ್ಲಿ ಈ ಬಗ್ಗೆ ಗಮನ ಸೆಳೆದಿದ್ದು ಪುತ್ತೂರು, ಸುಳ್ಯ, ಕಡಬ ಹಾಗೂ ಬೆಳ್ತಂಗಡಿ ತಾಲೂಕುಗಳಲ್ಲಿ ಕಾಡಾನೆಗಳು ನಾಡಿಗೆ ನುಗ್ಗಿ ಬೆಳೆ ಹಾನಿ ಮಾಡುವ ಘಟನೆಗಳು ದಿನೇದಿನೇ ಹೆಚ್ಚುತ್ತಿವೆ. ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ರೈತರು ಜೀವ, ಆಸ್ತಿ ಮತ್ತು ಕೃಷಿ ಸಂಪತ್ತು ಕಳೆದುಕೊಳ್ಳುತ್ತಿದ್ದಾರೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಶ್ವತ ಆನೆ ಶಿಬಿರ ಸ್ಥಾಪನೆ ಮಾಡಬೇಕು ಈ ನಿಟ್ಟಿನಲ್ಲಿ ಸುಬ್ರಮಣ್ಯ ಸಮೀಪ ಸಾಕಾನೆಗಳನ್ನು ಪಳಗಿಸುವ ಶಿಬಿರ ಸ್ಥಾಪಿಸಿದರೆ ತ್ವರಿತ ಕಾರ್ಯಾಚರಣೆ ಸಾಧ್ಯವಾಗುತ್ತದೆ ಹಾಗೂ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗುತ್ತದೆ.
ಆನೆಗಳಿಗೆ ರೇಡಿಯೋ ಕಾಲರ್ ಐಡಿ ಅಳವಡಿಕೆ – ಕಾಡಾನೆಗಳ ಚಲನವಲನವನ್ನು ನಿಖರವಾಗಿ ಪತ್ತೆ ಹಚ್ಚಲು ತಕ್ಷಣ ಕ್ರಮ ಕೈಗೊಳ್ಳಬೇಕು. ತುರ್ತು ಸಂದರ್ಭಗಳಲ್ಲಿ ಶೀಘ್ರ ಕಾರ್ಯಾಚರಣೆಗೆ ವಿಶೇಷ ಪಡೆ ರಚನೆ ಮಾಡಬೇಕು.
ಸೋಲಾರ್ ಬೇಲಿಗೆ ಶೇ.100 ಸಬ್ಸಿಡಿ ನೀಡಬೇಕು. ಈಗಿನ ಶೇ.50 ಸಬ್ಸಿಡಿಯನ್ನು ಶೇ.100 ಕ್ಕೆ ಹೆಚ್ಚಿಸಿ, ಕಾಡಂಚಿನ ಗ್ರಾಮಗಳ ಕೃಷಿ ಜಮೀನು ಮತ್ತು ಮನೆಗಳನ್ನು ರಕ್ಷಿಸಲು ಸಹಾಯ ಮಾಡಬೇಕು.
ಕಾಡಿನಲ್ಲಿ ಬೆತ್ತ ಬೆಳೆಯುವಿಕೆ ನಿಷೇಧ ಮಾಡಬೇಕು, ಬೆತ್ತ ಬೆಳೆಯುವುದರಿಂದ ಕಾಡು ನಾಶವಾಗುತ್ತಿದ್ದು, ಆಹಾರಾಭಾವದಿಂದ ಇತರ ಕಾಡುಪ್ರಾಣಿಗಳು ನಾಡಿಗೆ ನುಗ್ಗುತ್ತಿರುವುದರಿಂದ ತಕ್ಷಣ ನಿಷೇಧಿಸಬೇಕು.
ಕೋವಿ ಲೈಸನ್ಸ್ ವಿತರಣೆ ಮತ್ತು ನವೀಕರಣ ಸರಳೀಕರಣ ಮಾಡವೇಕು. ರೈತರಿಗೆ ಕಾಡು ಪ್ರಾಣಿಗಳಿಂದ ತಮ್ಮನ್ನು ಹಾಗೂ ಬೆಳೆಗಳನ್ನು ರಕ್ಷಿಸಲು ಅಗತ್ಯವಿರುವ ಲೈಸನ್ಸ್ ವಿತರಣೆಯ ಮತ್ತು ನವೀಕರಣದ ಪ್ರಕ್ರಿಯೆಯನ್ನು ಸುಗಮಗೊಳಿಸಬೇಕು.
ಸರ್ಕಾರ ಈ ಬೇಡಿಕೆಗಳನ್ನು ತ್ವರಿತವಾಗಿ ಪರಿಗಣಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಜನಜೀವನ ಮತ್ತು ಕೃಷಿಯನ್ನು ಕಾಡಾನೆ ಹಾವಳಿಯಿಂದ ರಕ್ಷಿಸಲು ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.ಇದಕ್ಕೆ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಕೂಡ ಧ್ವನಿಗೂಡಿಸಿದರು.





