ಮಂಗಳೂರು: ದೆಹಲಿಯ ಮುಖ್ಯಮಂತ್ರಿಗಳು ಹಾಗೂ ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಚಾಲಕರಾದ ಅರವಿಂದ ಕೇಜ್ರಿವಾಲ್ ಅವರ ಮಾರ್ಗದರ್ಶನದಲ್ಲಿ ಆಮ್ ಆದ್ಮಿ ಪಕ್ಷವು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಹೊಸ ಅಲೆಯನ್ನು ಹುಟ್ಟಿಸಲಿದೆ ಹಾಗೂ ಪ್ರಾಮಾಣಿಕ ಹಾಗೂ ಬ್ರಷ್ಟಾಚಾರ ರಹಿತ ಸರಕಾರವರನ್ನು ನೀಡಲಿದೆ ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಅಶೋಕ ಎಡಮಲೆ ಹೇಳಿದ್ದಾರೆ. ಕರ್ನಾಟಕದ್ಯಾಂತ ಸಂಚಲನ ಹುಟ್ಟಿಸಿರುವ ಆಮ್ ಆದ್ಮಿ ಪಾರ್ಟಿ, ಕರ್ನಾಟಕ ರಾಜ್ಯದ
ಅಸೆಂಬ್ಲಿ ಚುನಾವಣೆಗಳಿಗೆ ತನ್ನ ಪ್ರಥಮ ಪಟ್ಟಿಯನ್ನು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದ್ದು ಪ್ರಥಮ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಸಂತೋಷ ಕಾಮತ್, ಮುಲ್ಕಿ – ಮುಡೂಬಿದಿರೆ ಕ್ಷೇತ್ರಕ್ಕೆ ವಿಜಯನಾಥ್ ವಿಠಲ ಶೆಟ್ಟಿ ಹಾಗೂ ಸುಳ್ಯ ಕ್ಷೇತ್ರಕ್ಕೆ ಸುಮನಾ ಬೆಳ್ಳಾರ್ಕರ್ ಅವರ ಹೆಸರುಗಳನ್ನು ಅಂತಿಮಗೊಳಿಸಿದೆ. ಆಮ್ ಆದ್ಮಿ ಪಕ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಿ ಮನೆ ಮನೆ ಪ್ರಚಾರ ಕೆಲಸವನ್ನು ಈಗಾಗಲೆ ಹೆಚ್ಚಿನ ಮನೆಗಳನ್ನು ಸಂಪರ್ಕಿಸಲಾಗಿದೆ. ಪ್ರತಿಯೊಂದು ವಿಧಾನ ಸಭಾ ಕ್ಷೇತ್ರವನ್ನು ನಾಲ್ಕು ವಲಯಗಳಾಗಿ ವಿಂಗಡಿಸಿದ್ದು ಪ್ರತಿಯೊಂದು ವಲಯ ಮುಖಂಡರನ್ನು ನೇಮಿಸಿ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕವನ್ನು ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ಸಂತೋಷ್ ಕಾಮತ್ (ಮಂಗಳೂರು ದಕ್ಷಿಣ) : ಮಂಗಳೂರು ಮೂಲದ ಇವರು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದರು. ಪ್ರಸ್ತುತ ಅವರು ರಾಜ್ಯ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿದ್ದಾರೆ. ಉತ್ತಮ ವಾಗ್ಮಿಯಾಗಿರುವ ಇವರು ಹಲವು ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
ಸುಮನಾ ಬೆಳಾರ್ಕರ್ ಕೆ.ಕೆ. (ಸುಳ್ಯ) : ಬಿ.ಎ, ಎಂ.ಬಿ.ಎ. ಪದವಿಧರೆ ಆಗಿರುವ ಇವರು ಎರಡು ಬಾರಿ ಸುಳ್ಯ ಶಾಸಕರಾಗಿದ್ದ ಕೆ. ಕುಶಲ ಅವರ ಪುತ್ರಿಯಾಗಿದ್ದಾರೆ. ಕಾಲೇಜು ಜೀವನದಲ್ಲಿಯೆ ಸಾಮಾಜಿಕ ಬದ್ಧತೆ ಹೊಂದಿದ್ದ ಇವರು ಅನೇಕ ಸಮಾಜ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಇವರು ಉತ್ತಮ ವಾಗ್ಮಿ ಕೂಡಾ ಆಗಿದ್ದಾರೆ. ಆಶ್ರಯ ಯೋಜನೆಯ ಸಮಿತಿಯಲ್ಲಿ ಸದಸ್ಯರಾಗಿದ್ದ ಇವರು ಸುಮಾರು ೪೫೦ ಕುಟುಂಬಗಳಿಗೆ ಮನೆ ಸಿಗುವಲ್ಲಿ ಸಹಕಾರಿಯಾಗಿದ್ದಾರೆ.
ವಿಜಯನಾಥ ವಿಠಲ ಶೆಟ್ಟಿ (ಮುಲ್ಕಿ – ಮುಡೂಬಿದಿರೆ) : ಮೂದುಬಿದಿರೆ ಮೂಲದ ಖ್ಯಾತ ಉದ್ಯಮಿ ಆಗಿರುವ ಇವರು ಶ್ರೀ ಶಾಸ್ತಾವು ಭೂತನಾಥೇಶ್ವರ ಟ್ರಸ್ಟನ ಮುಖ್ಯ ಸಂಚಾಲಕರಾಗಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿರುವ ಇವರು ಬಜಪೆ ಬಂಟರ ಸಂಘದ ಗೌರವಾಧ್ಯಕ್ಷರಾಗಿದ್ದಾರೆ. ಇವರ ಮಾರ್ಗದರ್ಶನದಲ್ಲಿ ನಡೆದ “ಬಲೆ ತೆಲಿಪಾಲೆ” ಟಿ. ವಿ. ಕಾರ್ಯಕ್ರಮ ದಕ್ಷಿಣ ಕನ್ನಡ ಜಿಲ್ಲೆಯ ಜನಮನ ಗೆದ್ದಿದೆ. ಮಾಜಿ ಯೋಧರು ಹಾಗೂ ದೀನದಲಿತರ ಸೇವೆಯಲ್ಲಿ ತನ್ನನ್ನು ತಾನು ಯಾವಾಗಲೂ ತೊಡಗಿಸಿಕೊಂಡಿದ್ದಾರೆ ಎಂದು ಅಶೋಕ್ ಎಡಮಲೆ ತಿಳಿಸಿದ್ದಾರೆ.