ಸುಳ್ಯ:ಈ ಬಾರಿ ಸುಳ್ಯ ಕ್ಷೇತ್ರದಿಂದ ಆದಿದ್ರಾವಿಡ ಸಮುದಾಯಕ್ಕೆ ಅಭ್ಯರ್ಥಿತನದ ಅವಕಾಶ ಸಿಗಲಿ ಅವಕಾಶ ನೀಡದಿದ್ದರೆ ಮುಂಚೂಣಿ ಪಕ್ಷಗಳಿಗೆ ನಾವು ಮತ ಹಾಕುವುದಿಲ್ಲ ಎಂದು ಆದಿ ದ್ರಾವಿಡ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ಮೋನಪ್ಪ ರಾಜರಾಂಪುರ ಹಾಗೂ ಯುವ ವೇದಿಕೆ ಜಿಲ್ಲಾಧ್ಯಕ್ಷ ರಾಮಚಂದ್ರರು ಹೇಳಿದ್ದಾರೆ.
ಸುಳ್ಯದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು
ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿ ಆಯ್ಕೆಯಲ್ಲಿ ಆದಿದ್ರಾವಿಡ ಸಮುದಾಯವನ್ನು ಪರಿಗಣಿಸಬೇಕು. ಈ ಬಾರಿ ಸ್ಪಂದನೆ ಸಿಗದಿದ್ದರೆ ಗೆಲ್ಲುವ ಮುಂಚೂಣಿ ಪಕ್ಷಗಳಿಗೆ ನಮ್ಮ ಸಮುದಾಯದ ಮತದಾರರು ಮತ ಹಾಕುವುದಿಲ್ಲ. ಕಳೆದ ೨ ದಶಕಗಳಿಂದ ನಾವು ಬೇಡಿಕೆಯಿಡುತ್ತಿದ್ದರೂ ನಮ್ಮ ಬೇಡಿಕೆಗೆ ಪ್ರಮುಖ ರಾಜಕೀಯ ಪಕ್ಷಗಳು ಸ್ಪಂದಿಸಿಲ್ಲ. ಸುಳ್ಯ ಎಸ್ಸಿ ಮೀಸಲಾತಿ ಇರುವ ಕ್ಷೇತ್ರ. ಇಲ್ಲಿ ಗೌಡ ಸಮುದಾಯ ಬಿಟ್ಟರೆ ಅತೀ ಹೆಚ್ಚು ಮತದಾರರಿರುವುದು ಆದಿ ದ್ರಾವಿಡ ಸಮುದಾಯದಲ್ಲಿ. ಹೀಗಿರುವಾಗ ಎರಡು ದಶಕಗಳಿಂದಲೂ ಹೆಚ್ಚು ಸಮಯದಿಂದ ನಮ್ಮನ್ನು ಯಾರೂ ಪರಿಗಣಿಸದೇ ವಂಚಿಸುತ್ತಿದ್ದಾರೆ. ಬಿಜೆಪಿಯಲ್ಲಿ ನಮ್ಮ ಸಮುದಾಯದ ಪ್ರಮುಖರಾದ ಅಭ್ಯರ್ಥಿ ಅಕಾಂಕ್ಷಿಗಳು ಇದ್ದಾರೆ. ಇಂತವರಿಗೇ ಕೊಡಿ ಎಂದು ನಾವು ಹೇಳುವುದಿಲ್ಲ. ಆದರೆ ನಮ್ಮ ಸಮುದಾಯಕ್ಕೆ ಅವಕಾಶ ನೀಡಲೇಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗೋಪಾಲ ಅರಂಬೂರು, ಕಾಂಜೇಶ್ ಕಿಲಂಗೋಡಿ, ಕುಮಾರ ಪಾನತ್ತಿಲ ಇದ್ದರು.