ಪುತ್ತೂರು: 9/11 ಖಾತಾವನ್ನು ಸ್ಥಳೀಯ ಆಡಳಿತದಲ್ಲೇ ನೀಡಬೇಕು ಅಥವಾ ಈ ಹಿಂದೆ ಇದ್ದ ಮಾದರಿಯಲ್ಲೇ ಗ್ರಾಪಂ ಕಚೇರಿಯಲ್ಲಿಯೇ ನೀಡುವ ಬಗ್ಗೆ ರಾಜ್ಯ ಸರಕಾರ ತೀರ್ಮಾನವನ್ನು ಕೈಗೊಂಡಿದ್ದು ಈ ಮೂಲಕ ಶಾಸಕ ಅಶೋಕ್ ರೈ ಅವರು ನಡೆಸುತ್ತಿದ್ದ ಪ್ರಯತ್ನಕ್ಕೆ ಜಯ ದೊರೆತಂತಾಗಿದೆ ಎಂದು ಪುತ್ತೂರು ಶಾಸಕರ ಕಚೇರಿ ಮಾಹಿತಿ ನೀಡಿದೆ. ಈ ವಿಷಯವನ್ನು ವಿಧಾನಸಭಾ ಅಧಿವೇಶನದಲ್ಲಿ ಸರಕಾರವನ್ನು
ಆಗ್ರಹಿಸುವ ಮೂಲಕ ಜನರ ಸಂಕಷ್ಟವನ್ನು ಸರಕಾರದ ಮುಂದಿಡಲಾಗಿದೆ. ಕೆಲವು ತಿಂಗಳಿಂದ ಇದ್ದ 9/11 ಸಮಸ್ಯೆಗೆ ಸರಕಾರ ಮುಕ್ತಿನೀಡಿದ್ದು ಇನ್ನುಮುಂದೆ ಸ್ಥಳೀಯ ಆಡಳಿತದಮೂಲಕ 9/11 ನೀಡಲಿದೆ.
ಮನೆ ಕಟ್ಟುವಲ್ಲಿ 9/11 ಕಡ್ಡಾಯವಾಗಿ ಮಾಡಬೇಕು ಎಂಬ ಕಾನೂನು ಇದೆ. ಈ ಹಿಂದೆ ಗ್ರಾಪಂ ಕಚೇರಿಯಲ್ಲೇ ಇದು ಸಿಗುತ್ತಿತ್ತು. ಗ್ರಾಪಂ ಕಚೇರಿಯಲ್ಲಿ ನೀಡುತ್ತಿದ್ದ 9/11 ನ್ನು ಮಂಗಳೂರು ನಗರಪಾಲಿಕಾ ಮೂಡಾದಲ್ಲಿ ನೀಡಲಾಗುತ್ತಿತ್ತು. ಗ್ರಾಮಾಂತರ ಪ್ರದೇಶದ ಜನರು ಮನೆ ಕಟ್ಟಬೇಕಾದರೆ 9/11 ಗಾಗಿ ಮಂಗಳೂರಿಗೆ ಅಲೆದಾಡಬೇಕಿತ್ತು. ಇದು ಗ್ರಾಮೀಣ ಜನರಿಗೆ ಬಹಳ ಸಂಕಷ್ಟವನ್ನು ತಂದಿತ್ತು.
ಅಧಿವೇಶನದಲ್ಲಿ 9/11 ಸಂಕಷ್ಟದ ಬಗ್ಗೆ ಗಮನ ಸೆಳೆದ ಅಶೋಕ್ ರೈ
ಹೊಸ ನಿಯಮದಿಂದ ಮನೆ ಕಟ್ಟುವವರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ,ಯಾವುದೇ ಕಾರಣಕ್ಕೂ ಹೀಗಿರುವ ವ್ಯವಸ್ಥೆಯನ್ನು ಮುಂದುವರಿಸಬಾರದು ಎಂದು ಮನವಿ ಮಾಡಿದ್ದರು. ಶಾಸಕ ಅಶೋಕ್ ರೈ ಕಾಳಜಿಗೆ ದನಿಗೂಡಿಸಿದ್ದ ಸ್ಪೀಕರ್ ಯು ಟಿ ಖಾದರ್ ರವರು ಈ ಬಗ್ಗೆ ಕಂದಾಯ ಸಚಿವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳುವಂತೆ ಸರಕಾರಕ್ಕೆ ಸೂಚಿಸಿದ್ದರು. ಅದರಂತೆ ಇಂದು ನಡೆದ ಸಭೆಯಲ್ಲಿ ಸ್ಥಳೀಯ ಆಡಳಿತಕ್ಕೆ 9/11 ನೀಡಲು ಅವಕಾಶ ನೀಡಲಾಗಿದೆ.
9/11 ಸಮಸ್ಯೆ ದೊಡ್ಡ ಸಮಸ್ಯೆಯಾಗಿಯೇ ಉಳಿದಿತ್ತು. ಅಧಿವೇಶನದಲ್ಲಿ ಸರಕಾರದ ಗಮನಕ್ಕೆ ತಂದಿದ್ದೆ. ಇಂದು ಸರಕಾರ ಹೊಸ ಆದೇಶವನ್ನು ಜಾರಿಮಾಡಿದೆ. ಇನ್ನು ಜನರು 9/11 ಗಾಗಿಮೂಡಾಕ್ಕೆ ಹೋಗಬೇಕಾದ ಅವಶ್ಯಕತೆ ಇಲ್ಲ. ಸ್ಥಳೀಯ ಸಂಸ್ಥೆಗಳ ಕಚೇರಿಯಲ್ಲೇ ಇದು ದೊರೆಯಲಿದೆ ಎಂದು ಅಶೋಕ್ ರೈ ತಿಳಿಸಿದ್ದಾರೆ.