ತಿರುವನಂತಪುರಂ:68ನೇ ವಯಸ್ಸಿನಲ್ಲಿ 7ನೇ ತರಗತಿ ಪರೀಕ್ಷೆ ಬರೆದಿದ್ದಾರೆ ಮಲಯಾಳಂ ಚಲನಚಿತ್ರ ನಟ ಇಂದ್ರನ್ಸ್.ತನ್ನ ಹಾಸ್ಯ ನಟನೆಯ ಮೂಲಕ ಖ್ಯಾತರಾದ ಇಂದ್ರನ್ಸ್ ಇದೀಗ ಏಳನೇ ತರಗತಿ ಪರೀಕ್ಷೆಗೆ ಹಾಜರಾಗಿ ಗಮನ ಸೆಳೆದಿದ್ದಾರೆ. ಆ ಮೂಲಕ ಶಿಕ್ಷಣಕ್ಕೆ ವಯಸ್ಸು ಅಡ್ಡಿಯಲ್ಲ ಎಂಬುದನ್ನು ಇಂದ್ರನ್ಸ್ ಸಾಬೀತುಪಡಿಸಿದ್ದಾರೆ.ಅವರು ಕೇರಳ ಸಾಕ್ಷರತಾ ಮಿಷನ್ನ ಏಳನೇ ತರಗತಿಗೆ ಸಮಾನಾದ ಪರೀಕ್ಷೆಯನ್ನು
ಕೇರಳದ ಅಟ್ಟಕುಳಂಗರ ಶಾಲೆಯಲ್ಲಿ ಶನಿವಾರ ಬರೆದರು. ಅನಿವಾರ್ಯ ಪರಿಸ್ಥಿತಿಗಳಿಂದಾಗಿ ನಾಲ್ಕನೇ ತರಗತಿಯಲ್ಲೇ ಶಾಲೆ ತೊರೆದ ಇಂದ್ರನ್ಸ್ ಜೀವನೋಪಾಯಕ್ಕಾಗಿ ಟೈಲರಿಂಗ್ ಕಲಿತರು.ಟೈಲರಿಂಗ್ ಬಳಿಕ ಇಂದ್ರನ್ಸ್ ಅವರು ಸಿನಿಮಾ ಇಂಡಸ್ಟ್ರಿಯತ್ತ ಕಾಲಿಟ್ಟರು. ಆದ್ದರಿಂದ ಅವರ ಓದುವ ಕನಸು ಕನಸಾಗಿಯೇ ಉಳಿಯಿತು. ಸಿನಿಮಾ ಕ್ಷೇತ್ರದಲ್ಲೂ ಯಶಸ್ಸು ಪಡೆದಿರುವ ಇಂದ್ರನ್ಸ್ ಓದುವ ಹವ್ಯಾಸವನ್ನು ಮುಂದುವರಿಸಿದ್ದರು. ಹೀಗಾಗಿ ಪುಸ್ತಕಗಳನ್ನು ಖರೀದಿಸಿ ಅಧ್ಯಯನಗಳಲ್ಲಿ ತೊಡಗಿದ್ದಾರೆ. ಇದೀಗ ಓದು ಮುಂದುವರಿಸಬೇಕೆಂಬ ಹಂಬಲ ಅವರಿಗೆ ಆದರೆ, ನೇರವಾಗಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಿಲ್ಲ. 7 ಮತ್ತು 10ನೇ ತರಗತಿ ಪಾಸಾಗಿರಬೇಕು. ಅದಕ್ಕಾಗಿ ಇಂದ್ರನ್ಸ್ ಕೇರಳ ಸಾಕ್ಷರತಾ ಮಿಷನ್ನ ಏಳನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದಾರೆ. ಸದ್ಯ ಮಲಯಾಳಂ, ಇಂಗ್ಲಿಷ್ ಮತ್ತು ಹಿಂದಿ ಪರೀಕ್ಷೆಗಳಿಗೆ ಹಾಜರಾಗಿದ್ದಾರೆ. ಸಮಾಜ ವಿಜ್ಞಾನ, ವಿಜ್ಞಾನ ಮತ್ತು ಗಣಿತ ಪರೀಕ್ಷೆಗಳು ನಡೆಯಲಿದ್ದು, ಈ ಪರೀಕ್ಷೆಗಳ ಫಲಿತಾಂಶವನ್ನು ಇನ್ನೆರಡು ವಾರಗಳಲ್ಲಿ ಪ್ರಕಟಿಸಲಾಗುತ್ತದೆ. ಇದಾದ ಬಳಿಕ 10ನೇ ತರಗತಿ ಪರೀಕ್ಷೆಗೆ ಇಂದ್ರನ್ಸ್ ತಯಾರಿ ನಡೆಸಲಿದ್ದಾರೆ.