ನವದೆಹಲಿ: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶವು ಡಿ.3 ಭಾನುವಾರ ಪ್ರಕಟವಾಗಲಿದೆ.2024ರ ಮಹಾ ಚುನಾವಣೆಯ ಸೆಮಿ ಫೈನಲ್ ಎಂದೇ ಬಿಂಬಿತವಾಗಿರುವ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾನ, ಛತ್ತೀಸ್ಗಡ ಹಾಗೂ ಮಿಝೋರಾಂ ವಿಧಾನಸಭೆ ಚುನಾವಣೆ ನವೆಂಬರ್ 7ರಿಂದ 30ರ ನಡುವೆ ನಡೆದಿತ್ತು.ಗುರುವಾರ ಪ್ರಕಟವಾದ
ಮತಗಟ್ಟೆ ಸಮೀಕ್ಷೆಯಲ್ಲಿ ಮಧ್ಯಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ ಬಿಜೆಪಿ, ಛತ್ತೀಸಗಢ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ಈಶಾನ್ಯದ ಮಿಜೋರಾಂ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿರುವ ಸಾಧ್ಯತೆ ವ್ಯಕ್ತವಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ಗೆ ನಿರ್ಣಾಯಕವಾಗಿರುವ ಚುನಾವಣಾ ಫಲಿತಾಂಶದ ಬಗ್ಗೆ ದೇಶವೇ ಕುತೂಹಲದಿಂದ ಕಾಯುತಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ, ತೆಲಂಗಾಣ ಹಾಗೂ ಮಿಜೋರಾಂ ವಿಧಾನಸಭೆಗೆ ನಡೆದ ಚುನಾವಣೆಗಳಲ್ಲಿ ಸುಮಾರು 16.1 ಕೋಟಿ ಪ್ರಜೆಗಳು ಮತ ಚಲಾಯಿಸಿದ್ದರು. ಇವುಗಳಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ, ತೆಲಂಗಾಣಗಳ ವಿಧಾನಸಭೆ ಅವಧಿಯು 2024ರ ಜನವರಿ ತಿಂಗಳಲ್ಲಿ ಕೊನೆಯಾಗಲಿದ್ದರೆ, ಮಿಜೋರಾಂ ವಿಧಾನಸಭೆಯ ಅವಧಿ ಇದೇ ತಿಂಗಳು ಕೊನೆಯಾಗುತ್ತಿದೆ.