ಮೆಲ್ಬೋರ್ನ್: ಭಾರತ ಹಾಗೂ ಆಸ್ಟ್ರೇಲಿಯಾ ಮಧ್ಯೆ ನಾಲ್ಕನೇಯ ಟೆಸ್ಟ್ ಕುತೂಹಲ ಘಟ್ಟದತ್ತ ತಲುಪಿದೆ. ಎರಡನೇ ಇನ್ನಿಂಗ್ಸ್ನಲ್ಲಿ ಭಾರತೀಯ ವೇಗಿಗಳ ಬಿಗು ದಾಳಿಗೆ ಆಸೀಸ್ ಬ್ಯಾಟರ್ಗಳು ಪರದಾಡಿದರೆ, ಕೊನೆಯಲ್ಲಿ ಬಾಲಂಗೋಚಿಗಳಾದ ಲಿಯಾನ್ ಮತ್ತು ಬೊಲ್ಯಾಂಡ್ ಸೇರಿ ಭಾರತೀಯ ಬೌಲರ್ ಗಳನ್ನು ಸುಸ್ತು ಮಾಡಿದರು.
ಮೊದಲ ಇನ್ನಿಂಗ್ಸ್ ನಲ್ಲಿ 105 ರನ್ ಮುನ್ನಡೆಯೊಂದಿಗೆ ಎರಡನೇ
ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಆಸೀಸ್ ತಂಡವು ದಿನದ ಕೊನೆಗೆ 9 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿದೆ. ಇದರೊಂದಿಗೆ 333 ರನ್ ಮುನ್ನಡೆ ಸಾಧಿಸಿದೆ.ಮೊದಲ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಬಾರಿಸಿದ್ದ ಮಾರ್ನಸ್ ಲಬುಶೇನ್ ಮತ್ತೆ ಆಸೀಸ್ ಗೆ ನೆರವಾದರು. ಲಬುಶೇನ್ 70 ರನ್ ಗಳಿಸಿ ಔಟಾದರು. ಉಳಿದಂತೆ ನಾಯಕ ಪ್ಯಾಟ್ ಕಮಿನ್ಸ್ 41 ರನ್ ಮಾಡಿದರು. 173 ರನ್ ಗೆ 9 ವಿಕೆಟ್ ಬಿದ್ದಾಗ ಭಾರತಕ್ಕೆ ಸುಲಭ ಗುರಿ ಸಿಗುವ ಅಂದಾಜಿತ್ತು. ಆದರೆ ಕೊನೆಯ ವಿಕೆಟ್ ಗೆ ಜೊತೆಯಾದ ನಥನ್ ಲಿಯಾನ್ ಮತ್ತು ಸ್ಕಾಟ್ ಬೊಲ್ಯಾಂಡ್ ಮುರಿಯದ 55 ರನ್ ಜೊತೆಯಾಟ ನಡೆಸಿ ಬೌಲರ್ ಗಳನ್ನು ಕಾಡಿದರು.
ಮೂರನೇ ದಿನದಾಟದ ಅಂತ್ಯಕ್ಕೆ 9 ವಿಕೆಟ್ ಗೆ 358 ರನ್ ಗಳಿಸಿದ್ದ ಭಾರತವು ಇಂದು 369 ರನ್ ಗೆ ಆಲೌಟಾಯಿತು.