ರಾಜ್ಕೋಟ್: ಮುಂಬೈನ ಬ್ಯಾಟರ್ ಸರ್ಫರಾಜ್ ಖಾನ್ ಮತ್ತು ಉತ್ತರಪ್ರದೇಶದ ವಿಕೆಟ್ಕೀಪರ್ ಧ್ರುವ ಜುರೇಲ್ ಅವರಿಗೆ ಇಂಗ್ಲೆಂಡ್ ಎದುರಿನ ಮೂರನೇ ಟೆಸ್ಟ್ನಲ್ಲಿ ಪದಾರ್ಪಣೆ ಮಾಡುವ ಅವಕಾಶ ಸಿಗುವ ನಿರೀಕ್ಷೆ ಇದೆ. ಗಾಯಗೊಂಡಿರುವ ಕೆ.ಎಲ್. ರಾಹುಲ್ ಮತ್ತು ಲಯ ಕಂಡುಕೊಳ್ಳುವಲ್ಲಿ ಶ್ರೇಯಸ್ ಅಯ್ಯರ್ ವಿಫಲರಾಗಿದ್ದಾರೆ. ಆದ್ದರಿಂದ
ಮಧ್ಯಮ ಕ್ರಮಾಂಕದಲ್ಲಿ ಆಡಲು ಸರ್ಫರಾಜ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ವಿಕೆಟ್ಕೀಪರ್ ಎಸ್. ಭರತ್ ಅವರು ಬ್ಯಾಟಿಂಗ್ನಲ್ಲಿ ನಿರೀಕ್ಷೆಯ ಮಟ್ಟಕ್ಕೆ ಆಡುತ್ತಿಲ್ಲ. ಎರಡನೇ ಟೆಸ್ಟ್ ವೇಳೆ ಗಿಲ್ ಕೈಗೆ ಗಾಯವಾಗಿತ್ತು. ಆದರೆ ಗಾಯವೇನೂ ಗಂಭೀರವಲ್ಲ ಎಂದೂ ತಂಡದ ವೈದ್ಯಕೀಯ ಮೂಲಗಳು ತಿಳಿಸಿದ್ದವು. ಇದರಿಂದಾಗಿ ಅವರು ಮುಂದಿನ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತವಾಗಿದೆ.
ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಗುರುವಾರದಿಂದ ಮೂರನೇ ಟೆಸ್ಟ್ ನಡೆಯಲಿದೆ. ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರು ತಮ್ಮ ವೃತ್ತಿ ಜೀವನದ 100ನೇ ಟೆಸ್ಟ್ ಆಡಲಿದ್ದಾರೆ. ರಾಜ್ಕೋಟ್ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಅವರು ಈ ಮೈಲಿಗಲ್ಲು ಮುಟ್ಟಲಿದ್ಧಾರೆ. ಸ್ಟೋಕ್ಸ್ ಅವರು 99 ಟೆಸ್ಟ್ಗಳಲ್ಲಿ 6251 ರನ್ ಗಳಿಸಿದ್ದಾರೆ. 13 ಶತಕ ಮತ್ತು 31 ಅರ್ಧಶತಕ ಗಳಿಸಿದ್ದಾರೆ.









