ಇಂದೋರ್: ಆಸ್ಟ್ರೇಲಿಯ ವಿರುದ್ಧ ಬುಧವಾರ ಆರಂಭವಾದ 3ನೇ ಟೆಸ್ಟ್ ಪಂದ್ಯದಲ್ಲಿ ಪ್ರಥಮ ಇನ್ನೀಂಗ್ಸ್ನಲ್ಲಿ ಭಾರತ ಕೇವಲ 109 ರನ್ ಗೆ ಆಲೌಟಾಗಿದೆ.ಸ್ಪಿನ್ನರ್ಗಳಾದ ಮ್ಯಾಥ್ಯೂ ಕುಹ್ನೆಮನ್ ಹಾಗೂ ನಥಾನ್ ಲಿಯೊನ್ ದಾಳಿಗೆ ಭಾರತ ತಂಡದ ಬ್ಯಾಟಿಂಗ್ ಕುಸಿಯಿತು.
ಟಾಸ್ ಜಯಿಸಿದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್
ಆಯ್ದುಕೊಂಡರು. ಆದರೆ ಭಾರತದ ಆರಂಭ ಆಶಾದಾಯಕವಾಗಿಲ್ಲ. ಭಾರತವು 12ನೇ ಓವರ್ ನಲ್ಲಿ 45 ರನ್ ಗೆ 5 ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ ಚೇತರಿಸಿಕೊಳ್ಳಲು ವಿಫಲವಾಗಿ 33.2 ಓವರ್ ಗಳಲ್ಲಿ ಕೇವಲ 109 ರನ್ ಗೆ ಆಲೌಟಾಯಿತು.
ಸ್ಪಿನ್ನರ್ ಗಳಾದ ಕುಹ್ನೆಮನ್(5-16) ಹಾಗೂ ಲಿಯೊನ್(3-35)(ಅತ್ಯುತ್ತಮ ದಾಳಿ ಸಂಘಟಿಸಿ ಭಾರತವನ್ನು ಕಾಡಿದ್ದಾರೆ. ರೋಹಿತ್ ಶರ್ಮ(12) ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಶುಭಮನ್ ಗಿಲ್ 21 ರನ್ ಗಳಿಸಿ ಔಟಾಗಿದ್ದಾರೆ. ಚೇತೇಶ್ವರ ಪೂಜಾರ(1 ರನ್), ರವೀಂದ್ರ ಜಡೇಜ(4 ರನ್) ಹಾಗೂ ಶ್ರೇಯಸ್ ಅಯ್ಯರ್(0)ಬೇಗನೆ ವಿಕೆಟ್ ಕೈಚೆಲ್ಲಿದರು.ಮಾಜಿ ನಾಯಕ ವಿರಾಟ್ ಕೊಹ್ಲಿ(22 ರನ್)ಸರ್ವಾಧಿಕ ಸ್ಕೋರ್ ಗಳಿಸಿದರು.ಇತ್ತೀಚಿನ ವರದಿ ಬಂದಾಗ ಆಸ್ಟ್ರೇಲಿಯಾ ಒಂದು ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿದೆ.