ಹೈದರಾಬಾದ್: ಸಂಜು ಸ್ಯಾಮ್ಸನ್ ಅವರ ಸಿಡಿಲಬ್ಬರದ ಶತಕ ಹಾಗೂ ಅನುಭವಿ ಬ್ಯಾಟರ್ಗಳ ಮಿಂಚಿನ ಆಟದ ನೆರವಿನಿಂದ ಭಾರತ ತಂಡ ಟಿ20 ಕ್ರಿಕೆಟ್ ಇತಿಹಾಸದಲ್ಲಿ ತನ್ನ ಅತ್ಯಧಿಕ ಮೊತ್ತ ದಾಖಲಿಸಿತು. ಶನಿವಾರ ಬಾಂಗ್ಲಾದೇಶ ವಿರುದ್ಧ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯವನ್ನು ಭಾರತ 133 ರನ್ಗಳಿಂದ ಸುಲಭವಾಗಿ ಗೆದ್ದುಕೊಂಡಿತು.
ಭಾರತ 20 ಓವರುಗಳಲ್ಲಿ
6 ವಿಕೆಟ್ಗೆ 297 ರನ್ಗಳ ಭಾರಿ ಮೊತ್ತ ಗಳಿಸಿತು.ಬಾಂಗ್ಲಾದೇಶ 20 ಓವರುಗಳಲ್ಲಿ 7 ವಿಕೆಟ್ಗೆ 164 ರನ್ ಗಳಿಸಿ ಸವಾಲು ಮುಗಿಸಿತು. ವೇಗದ ಬೌಲರ್ ಮಯಂಕ್ ಯಾದವ್ (32ಕ್ಕೆ2) ಮತ್ತು ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ (30ಕ್ಕೆ3) ಪರಿಣಾಮಕಾರಿ ಎನಿಸಿದರು. ಭಾರತ ಸರಣಿಯನ್ನು 3–0 ಯಿಂದ ಗೆದ್ದುಕೊಂಡಿತು. ತೌಹಿದ್ ಹೃದಯ್ (ಅಜೇಯ 63, 42ಎ, 4×5, 6×3) ಮತ್ತು ಲಿಟನ್ ದಾಸ್ (42, 25ಎ, 4×8) ಬಾಂಗ್ಲಾ ಪರ ಪ್ರತಿರೋಧ ತೋರಿದರು. ಇದು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ದಾಖಲಾದ ಎರಡನೇ ಅತ್ಯಧಿಕ ಮೊತ್ತ. ನೇಪಾಳ, ಕಳೆದ ವರ್ಷ ಏಷ್ಯನ್ ಗೇಮ್ಸ್ನಲ್ಲಿ ಮಂಗೋಲಿಯಾ ವಿರುದ್ಧ 3 ವಿಕೆಟ್ಗೆ 314 ರನ್ ಗಳಿಸಿದ್ದು ದಾಖಲೆಯಾಗಿದೆ. ಆದರೆ ಟೆಸ್ಟ್ ಆಡುವ ತಂಡಗಳ ಪೈಕಿ ಇದು ದಾಖಲೆಯ ಮೊತ್ತ. 2019ರಲ್ಲಿ ಡೆಹ್ರಾಡೂನ್ ನಲ್ಲಿ ಅಫ್ಗಾನಿಸ್ತಾನ, ಐರ್ಲೆಂಡ್ ವಿರುದ್ಧ 3 ವಿಕೆಟ್ಗೆ 278 ರನ್ ಗಳಿಸಿದ್ದು, ಇದುವರೆಗಿನ ಅತ್ಯಧಿಕ ಮೊತ್ತವಾಗಿತ್ತು.
ಭಾರತದ ಈ ಹಿಂದಿನ ಗರಿಷ್ಠ ಮೊತ್ತ 5 ವಿಕೆಟ್ಗೆ 260 ರನ್ಗಳಾಗಿತ್ತು. ಇದನ್ನು ಶ್ರೀಲಂಕಾ ವಿರುದ್ಧ 2017ರಲ್ಲಿ ಇಂದೋರ್ನಲ್ಲಿ ಗಳಿಸಿತ್ತು.
ಸಂಜು ಸ್ಯಾಮ್ಸನ್ ಕೇವಲ 47 ಎಸೆತಗಳಲ್ಲಿ 111 ರನ್ (4×11, 6×8) ಚಚ್ಚಿದರು. ಇದು ಟಿ20 ಕ್ರಿಕೆಟ್ನಲ್ಲಿ ಭಾರತದ ಪರ ಎರಡನೇ ಅತಿ ವೇಗದ ಶತಕ. ವೇಗದ ಶತಕದ ದಾಖಲೆ ರೋಹಿತ್ ಶರ್ಮಾ (35 ಎಸೆತ) ಹೆಸರಿನಲ್ಲಿದೆ. ಸಂಜು ಅವರು ನಾಯಕ ಸೂರ್ಯಕುಮಾರ್ ಯಾದವ್ (75, 4×8, 6×5) ಜೊತೆ ಎರಡನೇ ವಿಕೆಟ್ಗೆ 173 ರನ್ ಸೇರಿಸಿದರು.
ತಸ್ಕಿನ್ ಅಹ್ಮದ್ ಬೌಲಿಂಗ್ನಲ್ಲಿ ಅವರು ಸತತ ನಾಲ್ಕು ಬೌಂಡರಿಗಳನ್ನು ಬಾರಿಸಿದ್ದ ಸಂಜು ರಿಷದ್ ಹುಸೇನ್ ಮಾಡಿದ ಇನಿಂಗ್ಸ್ನ ಹತ್ತನೇ ಓವರಿನಲ್ಲಿ ಸತತ ಐದು ಸಿಕ್ಸರ್ ಎತ್ತಿದರು. ಮೂಲಕ 40 ಎಸೆತಗಳಲ್ಲಿ ಶತಕ ಪೂರೈಸಿದರು. ಕೊನೆಯಲ್ಲಿ ಹಾರ್ದಿಕ್ ಪಡ್ಯ (47, 18ಎ, 4×4, 6×4) ಮತ್ತು ರಿಯಾನ್ ಪರಾಗ್ (34, 13ಎ, 4×1, 6×4) ಅವರು ಮಿಂಚಿನ ಆಟವಾಡಿ ದಾಖಲೆ ಮೊತ್ತ ಪೇರಿಸಿದರು.