ಬೆಂಗಳೂರು: ಚನ್ನಪಟ್ಟಣ, ಶಿಗ್ಗಾವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತದಾನ ಇಂದು ನಡೆಯುತಿದೆ. ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿದೆ. ಈ ಮೂರೂ ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆಯಿದೆ. ತಮ್ಮ ಪುತ್ರರ ರಾಜಕೀಯ
ಭವಿಷ್ಯಕ್ಕೆ ಮುನ್ನಡಿ ಬರೆಯಲಿರುವ ಈ ಚುನಾವಣೆಯನ್ನು ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಎಚ್.ಡಿ. ಕುಮಾರಸ್ವಾಮಿ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಜೊತೆಗೆ ಕ್ಷೇತ್ರವನ್ನು ಉಳಿಸಿಕೊಳ್ಳುವ ಸವಾಲೂ ಅವರ ಮುಂದಿದೆ.
ಬಿಜೆಪಿ ತ್ಯಜಿಸಿ ಬಂದ ಸಿ.ಪಿ. ಯೋಗೇಶ್ವರ್ಗೆ ಚನ್ನಪಟ್ಟಣದಲ್ಲಿ ಮಣೆ ಹಾಕಿರುವ ರಾಜ್ಯ ಕಾಂಗ್ರೆಸ್ ನಾಯಕರು, ಈ ಕ್ಷೇತ್ರವನ್ನು ಜೆಡಿಎಸ್ನಿಂದ ಕಸಿದುಕೊಳ್ಳಲೇಬೇಕೆಂಬ ಪಣ ತೊಟ್ಟಿದ್ದಾರೆ. ಚನ್ನಪಟ್ಟಣದಂತೆ ಸಂಡೂರು ಕೂಡ ರಾಜ್ಯದ ಗಮನ ಸೆಳೆದಿದೆ. ಕಾಂಗ್ರೆಸ್ನ ಭದ್ರಕೋಟೆ ಎನಿಸಿರುವ ಈ ಮೀಸಲು ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಲು ಬಿಜೆಪಿ ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಮತದಾನದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದ್ದು, ಬಿಗಿ ಭದ್ರತೆ ಕಲ್ಪಿಸಲಾಗಿದೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿದೆ.