ಡಬ್ಲಿನ್:ಭಾರತ ತಂಡವು ಐರ್ಲೆಂಡ್ ಎದುರಿನ ಎರಡನೇ ಟಿ20 ಪಂದ್ಯವನ್ನು 33 ರನ್ಗಳಿಂದ ಗೆದ್ದುಕೊಂಡಿತು.ಈ ಮೂಲಕ ಜಸ್ಪ್ರೀತ್ ಬೂಮ್ರಾ ಬಳಗ ಮೂರು ಪಂದ್ಯಗಳ ಸರಣಿಯನ್ನು 2–0 ಯಿಂದ ಕೈವಶ ಮಾಡಿಕೊಂಡಿದೆ. ಮೂರನೇ ಹಾಗೂ ಅಂತಿಮ ಪಂದ್ಯ ಬುಧವಾರ ನಡೆಯಲಿದೆ.ಮೊದಲು ಬ್ಯಾಟ್ ಮಾಡಿದ ಭಾರತ
20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 185 ರನ್ ಗಳಿಸಿತು. ಆ ಬಳಿಕ ಆತಿಥೇಯ ತಂಡವನ್ನು 8 ವಿಕೆಟ್ ನಷ್ಟಕ್ಕೆ 152 ರನ್ಗಳಿಗೆ ನಿಯಂತ್ರಿಸಿತು.
ಐರ್ಲೆಂಡ್ ಪರ ಆರಂಭಿಕ ಬ್ಯಾಟರ್ ಆ್ಯಂಡಿ ಬಲ್ಬರ್ನಿ (72 ರನ್; 52 ಎ., 4X5, 6X4) ಮಾತ್ರ ಪ್ರತಿರೋಧ ಒಡ್ಡಿದರು.ಪ್ರಸಿದ್ಧ ಕೃಷ್ಣ (29ಕ್ಕೆ 2) ಬೂಮ್ರಾ (15ಕ್ಕೆ 2) ಮತ್ತು ರವಿ ಬಿಷ್ಣೋಯಿ (37ಕ್ಕೆ 2) ತಲಾ ಎರಡು ವಿಕೆಟ್ ಪಡೆದರು. ಇದಕ್ಕೂ ಮುನ್ನ ಟಾಸ್ ಗೆದ್ದ ಐರ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಋತುರಾಜ್ ಗಾಯಕ್ವಾಡ್ (58; 43ಎ, 4X6, 6X1) ಮತ್ತು ಸಂಜು ಸ್ಯಾಂಸನ್ (40; 26ಎ, 4X5, 6X1) ಉತ್ತಮ ಮೊತ್ತ ಗಳಿಸಲು ನೆರವಾದರು. ರಿಂಕು ಸಿಂಗ್ 21ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್ ಸಹೀತ 38 ರನ್ ಸಿಡಿಸಿದರು.ಶಿವಂ ದುಬೆ 16 ಎಸೆತಗಳಲ್ಲಿ ಎರಡು ಸಿಕ್ಸರ್ ಸಹೀತ 22 ರನ್ ಗಳಿಸಿದರು.