ಮುಂಬೈ:ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.ಹಾಲಿ ಚಾಂಪಿಯನ್ ಮತ್ತು ಆತಿಥೇಯ ಭಾರತವು ಟೂರ್ನಿಯ ಆರಂಭದಿಂದಲೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ಭಾರತದ ಪಯಣ ಸುಲಭವಾಗಿರಲಿಲ್ಲ.ಸೂಪರ್ 8 ಹಂತದ
ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಎದುರು ಸಂಜು ಸ್ಯಾಮ್ಸನ್ (ಅಜೇಯ 97) ಅವರ ಏಕಾಂಗಿ ಹೋರಾಟದಿಂದಲೇ ತಂಡವು ಗೆದ್ದಿತು. 31 ವರ್ಷದ ಸಂಜು ಫಾರ್ಮ್ಗೆ ಮರಳಿದ್ದು ತಂಡದಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಅವರೊಂದಿಗೆ ಇನಿಂಗ್ಸ್ ಆರಂಭಿಸುವ ಅಭಿಷೇಕ್ ಶರ್ಮಾ ಅವರೂ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮಿಂಚುವ ನಿರೀಕ್ಷೆ ಮೂಡಿಸಿದೆ. ಇಬ್ಬರೂ ಸೇರಿ ಉತ್ತಮ ಅಡಿಪಾಯ ಹಾಕಿದರೆ ದೊಡ್ಡ ಮೊತ್ತದ ಸೌಧ ಕಟ್ಟಬಹುದು. ಪವರ್ಪ್ಲೇ ಹಂತದಲ್ಲಿ ಅವರ ಆರ್ಭಟಕ್ಕೆ ತಡೆಯೊಡ್ಡಲು ಇಂಗ್ಲೆಂಡ್ ಕೂಡ ಸ್ಪಿನ್ನರ್ ನೆರವು ಪಡೆಯುವ ಸಾಧ್ಯತೆ ಇದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುವ ಸೂರ್ಯ, ತಿಲಕ್ ವರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಅವರಿಗೆ ವಾಂಖೆಡೆ ಅಂಗಳ ಚಿರಪರಿಚಿತವಾಗಿದೆ. ಅದರಲ್ಲೂ ಸೂರ್ಯ ಅವರಿಗೆ ಇದು ತವರು.
ವೇಗಿ ಜಸ್ಪ್ರೀತ್ ಬೂಮ್ರಾ ಅವರು ಉತ್ತಮ ಲಯದಲ್ಲಿರುವುದು ಸಮಾಧಾನದ ವಿಷಯ. ಶಿವಂ ದುಬೆ ಆರನೇ ಬೌಲರ್ ಆಗಬಹುದು. ಕಳೆದ ಪಂದ್ಯದಲ್ಲಿ ಇದ್ದ ತಂಡವನ್ನೇ ಇಲ್ಲಿಯೂ ಕಣಕ್ಕಿಳಿಸುವ ಯೋಚನೆಯಲ್ಲಿರುವ ತಂಡವು ಕುಲದೀಪ್ ಯಾದವ್ ಅವರಿಗೆ ಸ್ಥಾನ ನೀಡುವುದು ಅನುಮಾನ.
ಇಂಗ್ಲೆಂಡ್ ತಂಡವು ಹ್ಯಾರಿ ಬ್ರೂಕ್ ಹಾಗೂ ಆಲ್ರೌಂಡರ್ ವಿಲ್ ಜ್ಯಾಕ್ಸ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಜೋಸ್ ಬಟ್ಲರ್ ಅವರು ಫಾರ್ಮ್ನಲ್ಲಿ ಇಲ್ಲ. ಸೀಮಿತ ಓವರ್ಗಳಲ್ಲಿ ಅಮೋಘ ಸಾಧಕರಾಗಿರುವ ಬಟ್ಲರ್ ಅವರು ಇಲ್ಲಿ ಲಯಕ್ಕೆ ಮರಳದಂತೆ ನೋಡಿಕೊಳ್ಳುವತ್ತ ಬೌಲರ್ಗಳು ಚಿತ್ತ ಹರಿಸಬೇಕಿದೆ. ಆಲ್ರೌಂಡರ್ ಸ್ಯಾಮ್ ಕರನ್ ಅವರು ತಂಡಕ್ಕೆ ಆಸರೆಯಾಗಬಲ್ಲ ಸಾಮರ್ಥ್ಯ ಹೊಂದಿದ್ದಾರೆ.
ಸತತ ಮೂರನೇ ಸೆಮಿಫೈನಲ್ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಸತತ ಮೂರನೇ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮುಖಾಮುಖಿಯಾಗುತ್ತಿವೆ. 2022ರ ಟೂರ್ನಿಯ ನಾಲ್ಕರ ಘಟ್ಟದಲ್ಲಿ ಇಂಗ್ಲೆಂಡ್ ತಂಡವು ಭಾರತಕ್ಕೆ ಸೋಲುಣಿಸಿತ್ತು. 2024ರಲ್ಲಿ ಭಾರತ ಗೆದ್ದಿತ್ತು.







