ಕೊಲಂಬೊ: ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡ ಭಾರತದ ವಿರುದ್ಧ 32 ರನ್ ಅಂತರದ ಜಯ ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1–0 ಅಂತರದ ಮುನ್ನಡೆ ಸಾಧಿಸಿತು.
ಜೆಫ್ರೀ ವಂಡರ್ಸೇ ಹಾಗೂ ಚರಿತ ಅಸಲಂಕ ಅವರ ಬೌಲಿಂಗ್ ದಾಳಿ ಮುಂದೆ ಭಾರತದ ಬ್ಯಾಟಿಂಗ್ ಕುಸಿಯಿತು. 241 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ
ಭಾರತ 42.2 ಓವರ್ 208 ರನ್ಗಳಿಗೆ ಆಲ್ ಔಟ್ ಆಯಿತು. ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಬಿರುಸಿನ ಆರಂಭ ನೀಡಿದರು. ತಂಡದ ಮೊತ್ತ 75 ರನ್ ಆಗುವ ಮೊದಲೇ ಅರ್ಧಶತಕ ಬಾರಿಸಿದ ಅವರು ಟಿ20 ಶೈಲಿಯಲ್ಲಿ ಬ್ಯಾಟ್ ಬೀಸಿದರು. ಶುಭಮನ್ ಗಿಲ್ ಜೊತೆಗೂಡಿ ಮೊದಲ ವಿಕೆಟ್ ಪಾಲುದಾರಿಕೆಯಲ್ಲಿ 97 ರನ್ ಕಲೆಹಾಕಿದರು. ಆದರೂ, ಟೀಂ ಇಂಡಿಯಾಗೆ ಗೆಲುವು ದಕ್ಕಲಿಲ್ಲ. 44 ಎಸೆತಗಳಲ್ಲಿ 64 ರನ್ ಗಳಿಸಿದರು. 35 ರನ್ ಗಳಿಸಿದ್ದ ಗಿಲ್, ವಿರಾಟ್ ಕೊಹ್ಲಿ (14), ಶಿವಂ ದುಬೆ (0), ಶ್ರೇಯಸ್ ಅಯ್ಯರ್ (7), ಕೆ.ಎಲ್. ರಾಹುಲ್ (0) ಅವರೂ ವಂಡರ್ಸೇ ಸ್ಪಿನ್ ಖೆಡ್ಡಾದಲ್ಲಿ ಬಿದ್ದರು. ಕಳೆದ ಪಂದ್ಯದಲ್ಲಿ 24 ರನ್ ಗಳಿಸಿ ಔಟಾಗಿದ್ದ ಕೊಹ್ಲಿ, ದೊಡ್ಡ ಮೊತ್ತ ಪೇರಿಸಲು ಈ ಬಾರಿಯೂ ವಿಫಲರಾದರು.
ಪ್ರವಾಸಿ ಪಡೆಯ ಮೊದಲ ಆರು ವಿಕೆಟ್ಗಳನ್ನು ಕಬಳಿಸಿದ ವಂಡರ್ಸೇಗೆ ಮತ್ತೊಂದು ತುದಿಯಲ್ಲಿ ನಾಯಕ ಚರಿತ ಅಸಲಂಕ ಉತ್ತಮ ಸಹಕಾರ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಪ್ರತಿರೋಧ ತೋರಿದ ಅಕ್ಷರ್ ಪಟೇಲ್ (44 ರನ್) ಅವರನ್ನು ಪೆವಿಲಿಯನ್ಗೆ ಅಟ್ಟಿದರು. ವಾಷಿಂಗ್ಟನ್ ಸುಂದರ್ (15) ಹಾಗೂ ಮೊಹಮ್ಮದ್ ಸಿರಾಜ್ (4) ಅವರೂ ಅಸಲಂಕಗೆ ವಿಕೆಟ್ ಒಪ್ಪಿಸಿದರು. ರೋಹಿತ್ ಪಡೆಯ 9 ವಿಕೆಟ್ಗಳು ಸ್ಪಿನ್ನರ್ಗಳ ಪಾಲಾದವು.
ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ತಂಡ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 240 ರನ್ ಗಳಿಸಿತು. ಅವಿಷ್ಕ ಫರ್ನಾಂಡೊ (40) ಹಾಗೂ ಕುಶಾಲ್ ಮೆಂಡೀಸ್ (30),ದುನಿತ್ ವೆಲ್ಲಾಳಗೆ (39) ಹಾಗೂ ಕಮಿಂದು ಮೆಂಡಿಸ್ (40) ಉಪಯುಕ್ತ ಆಟವಾಡಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.
ವಾಸಿಂಗ್ಟನ್ ಸುಂದರ್ ಮೂರು, ಕುಲ್ದೀಪ್ ಯಾದವ್ ಎರಡು ಹಾಗೂ ಅಕ್ಷರ್ ಪಟೇಲ್, ಮಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಕಿತ್ತರು.