ರಾಂಚಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಭಾನುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಏಳು ವಿಕೆಟ್ ಅಂತರದ ಗೆಲುವು ದಾಖಲಿಸಿದೆ. ಶ್ರೇಯಸ್ ಅಯ್ಯರ್ ಅಮೋಘ ಶತಕ (ಅಜೇಯ 113) ಮತ್ತು ಇಶಾನ್ ಕಿಶನ್ ಬಿರುಸಿನ ಅರ್ಧಶತಕದ (93) ನೆರವಿನಿಂದ ಭಾರತ ಭರ್ಜರಿ ಜಯ ಗಳಿಸಿತು.ಈ ಮೂಲಕ ಮೂರು ಪಂದ್ಯಗಳ
ಏಕದಿನ ಸರಣಿಯಲ್ಲಿ 1-1ರ ಅಂತರದ ಸಮಬಲ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ, ಏಡನ್ ಮಾರ್ಕರಮ್ (79) ಮತ್ತು ರೀಜಾ ಹೆನ್ರಿಕ್ಸ್ (74) ಆಕರ್ಷಕ ಅರ್ಧಶತಗಳ ನೆರವಿನಿಂದ ಏಳು ವಿಕೆಟ್ ನಷ್ಟಕ್ಕೆ 278 ರನ್ ಪೇರಿಸಿತು.
ಬಳಿಕ ಗುರಿ ಬೆನ್ನಟ್ಟಿದ ಭಾರತ ತಂಡವು, 45.5 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಮೂರನೇ ವಿಕೆಟ್‌ಗೆ 161 ರನ್‌ಗಳ ಜೊತೆಯಾಟ ಕಟ್ಟಿದ ಅಯ್ಯರ್ ಹಾಗೂ ಕಿಶನ್ ಭಾರತದ ಗೆಲುವಿನ ರೂವಾರಿ ಎನಿಸಿದರು. ನಾಯಕ ಶಿಖರ್ ಧವನ್ (13) ವಿಕೆಟ್ ಭಾರತಕ್ಕೆ ಆರಂಭದಲ್ಲೇ ನಷ್ಟವಾಗಿತ್ತು. ಶುಭಮನ್ ಗಿಲ್ (28) ಸಹ ಪ್ರಭಾವಿ ಎನಿಸಲಿಲ್ಲ. ಇಷನ್ ಕಿಶನ್ 84 ಎಸೆತಗಳಲ್ಲಿ ಏಳು ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ನೆರವಿನಿಂದ 93 ರನ್ ಗಳಿಸಿದರು. ತಂಡವನ್ನು ಗೆಲುವಿನ ದಡ ಸೇರಿಸಿದ ಅಯ್ಯರ್ 111 ಎಸೆತಗಳಲ್ಲಿ 113 ರನ್ ಗಳಿಸಿ ಔಟಾಗದೆ ಉಳಿದರು. ಅಯ್ಯರ್ ಇನ್ನಿಂಗ್ಸ್‌ನಲ್ಲಿ 15 ಬೌಂಡರಿಗಳು ಸೇರಿದ್ದವು. ಅಲ್ಲದೆ ಮುರಿಯದ ನಾಲ್ಕನೇ ವಿಕೆಟ್‌ಗೆ ಸಂಜು ಸ್ಯಾಮ್ಸನ್ ಜೊತೆಗೆ 73 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಸಂಜು 36 ಎಸೆತಗಳಲ್ಲಿ ತಲಾ ಒಂದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 30 ರನ್ ಗಳಿಸಿ ಅಜೇಯರಾಗುಳಿದರು.