ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎರಡು ಹೆದ್ದಾರಿ ಕಾಮಗಾರಿಗಳಿಗೆ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿಯವರು ಫೆ.22ರಂದು ಶಿಲಾನ್ಯಾಸ ಮಾಡಲಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಎನ್.ಹೆಚ್. 73ರಲ್ಲಿ ಉಜಿರೆ-ಧರ್ಮಸ್ಥಳ-ಪೆರಿಯಶಾಂತಿ ವರೆಗಿನ ಸುಮಾರು 28.50 ಕಿ.ಮೀ. ಉದ್ದದ ದ್ವಿಪಥ ರಸ್ತೆ ಅಗಲೀಕರಣ (ಪೇವ್ಡ್ ಶೋಲ್ಡರ್ ಸಹಿತ) ಕಾಮಗಾರಿ ಸುಮಾರು ಅಂದಾಜು
ವೆಚ್ಚ ರೂ.614.00 ಕೋಟಿ ವೆಚ್ಚದಲ್ಲಿ ನಡೆಯಲಿದೆ. ಇನ್ನೊಂದು ಕಾಮಗಾರಿ ರಾಷ್ಟ್ರೀಯ ಹೆದ್ದಾರಿ ಎನ್.ಹೆಚ್.73 ರಲ್ಲಿ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಸುಮಾರು 11 ಕಿ.ಮೀ. ದ್ವಿಪಥ ರಸ್ತೆ ಅಗಲೀಕರಣ (ಪೇವ್ಡ್ ಶೋಲ್ಡರ್ ಸಹಿತ) ಸುಮಾರು ಅಂದಾಜು ವೆಚ್ಚ ರೂ.344.00 ಕೋಟಿ* ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಜಿಲ್ಲೆಯ ಈ ಎರಡೂ ಕಾಮಗಾರಿಗಳ ಸಹಿತ ಸುಮಾರು ರೂ.6200 ಕೋಟಿ ವೆಚ್ಚದ ವಿವಿಧ ಹೆದ್ದಾರಿಗಳನ್ನು ರಾಷ್ಟ್ರಕ್ಕೆ ಸಮರ್ಪಣೆ/ಶಿಲನ್ಯಾಸ ಕಾರ್ಯಕ್ರಮವನ್ನು ಫೆ.22ರಂದು ಶಿವಮೊಗ್ಗದಿಂದ ನಿತಿನ್ ಗಡ್ಕರಿಯವರು ನೆರವೇರಿಸಲಿದ್ದಾರೆ. ಈ ಕಾಮಗಾರಿಗಳಿಂದ ಕರಾವಳಿ ಪ್ರದೇಶಕ್ಕೆ ಉತ್ತಮ ಸಂಪರ್ಕ ದೊರೆಯಲಿದ್ದು, ಪ್ರಯಾಣಿಕರಿಗೆ, ಆರ್ಥಿಕ ಚಟುವಟಿಕೆಗಳಿಗೆ ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುಕೂಲ ದೊರೆಯಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.