ಮಂಗಳೂರು:ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಮಳೆಯಾಗುತ್ತಿದೆ. ಅದರ ಪರಿಣಾಮ ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿಯೂ ಕೆಲವು
ಕಡೆ ಮಳೆಯಾಗುವ ಸೂಚನೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಜಿಟಿ ಜಿಟಿ ಮಳೆ ಸುರಿದಿತ್ತು. ರಾಜ್ಯದ ದಕ್ಷಿಣ ಒಳನಾಡಿನ ನಾಲ್ಕೈದು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶನಿವಾರ ದಿನವಿಡೀ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆ ಸುರಿದಿದೆ. ಸುಳ್ಯ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಶನಿವಾರ ಮೋಡ ಕವಿದ ವಾತಾವರಣ ಇದ್ದು ಕೆಲವೆಡೆ ಹನಿ ಮಳೆಯಾಗಿದೆ. ಭಾನುವಾರವೂ ಮೋಡ ಕವಿದ ವಾತಾವರಣ ಮುಂದುವರಿದಿದೆ. ಹನಿ ಮಳೆ, ಸಾಧಾರಣ ಮಳೆಯಾಗುವ ಸಂಭವ ಇದೆ ಎಂಬ ಸೂಚನೆ ಇದೆ.