ಮುಂಬೈ: ಕನ್ನಡಿಗ ಕೆ.ಎಲ್. ರಾಹುಲ್ ಆಕರ್ಷಕ ಅಜೇಯ ಅರ್ಧಶತಕದ (75) ನೆರವಿನಿಂದ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ದ ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಗೆಲುವಿಗಾಗಿ 189 ರನ್ಗಳ ಸುಲಭ ಗುರಿ ಬೆನ್ನಟ್ಟಿದ ಭಾರತ 83 ರನ್ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ
ಸಿಲುಕಿತ್ತು. ಆದರೆ ಮುರಿಯದ ಆರನೇ ವಿಕೆಟ್ಗೆ ರವೀಂದ್ರ ಜಡೇಜ (45) ಅವರೊಂದಿಗೆ ಶತಕದ (108*) ಜೊತೆಯಾಟ ಕಟ್ಟಿದ ರಾಹುಲ್ ತಂಡವನ್ನು ಗೆಲುವಿನ ದಡ ಸೇರಿಸಿದರು.ಮಿಚೆಲ್ ಸ್ಟಾರ್ಕ್ (49ಕ್ಕೆ 3 ವಿಕೆಟ್) ಹಾಗೂ ಮಾರ್ಕಸ್ ಸ್ಟೋಯಿನಿಸ್ (27ಕ್ಕೆ 2 ವಿಕೆಟ್) ಭಾರತವನ್ನು ಕಾಡಿದರು. ಇಶಾನ್ ಕಿಶನ್ (3), ವಿರಾಟ್ ಕೊಹ್ಲಿ (4), ಸೂರ್ಯಕುಮಾರ್ ಯಾದವ್ (0), ಶುಭಮನ್ ಗಿಲ್ (20) ಹಾಗೂ ನಾಯಕ ಹಾರ್ದಿಕ್ ಪಾಂಡ್ಯ (25) ನಿರಾಸೆ ಮೂಡಿಸಿದರು. ಇನ್ನೊಂದೆಡೆ ದಿಟ್ಟ ಹೋರಾಟ ನೀಡಿದ ರಾಹುಲ್ ತಂಡಕ್ಕೆ ಆಸರೆಯಾದರು. 91 ಎಸೆತಗಳನ್ನು ಎದುರಿಸಿದ ರಾಹುಲ್ ಏಳು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 75 ರನ್ ಗಳಿಸಿ ಔಟಾಗದೆ ಉಳಿದರು. ಈ ಮೂಲಕ ಟೆಸ್ಟ್ ಸರಣಿಯಲ್ಲಿನ ಕಳಪೆ ಫಾರ್ಮ್ಗೆ ತಮ್ಮ ಬ್ಯಾಟ್ ಮೂಲಕವೇ ಉತ್ತರಿಸಿದರು. ರಾಹುಲ್ಗೆ ತಕ್ಕ ಸಾಥ್ ನೀಡಿದ ಜಡೇಜ 45 ರನ್ ಗಳಿಸಿ (69 ಎಸೆತ, 5 ಬೌಂಡರಿ) ಔಟಾಗದೆ ಉಳಿದರು.
ಪರಿಣಾಮ ಭಾರತ 39.5 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.ಈ ಮೊದಲು ಮೊಹಮ್ಮದ್ ಶಮಿ (17ಕ್ಕೆ 3) ಹಾಗೂ ಮೊಹಮ್ಮದ್ ಸಿರಾಜ್ (29ಕ್ಕೆ 3) ಸೇರಿದಂತೆ ಭಾರತೀಯ ಬೌಲರ್ಗಳ ಸಾಂಘಿಕ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ 35.4 ಓವರ್ಗಳಲ್ಲಿ 188 ರನ್ಗಳಿಗೆ ಆಲೌಟ್ ಆಯಿತು.
ಇದೇ ಮೊದಲ ಬಾರಿಗೆ ಏಕದಿನದಲ್ಲೂ ನಾಯಕತ್ವ ವಹಿಸಿರುವ ಹಾರ್ದಿಕ್ ಪಾಂಡ್ಯ, ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಆರಂಭದಲ್ಲೇ ಅಪಾಯಕಾರಿ ಟ್ರಾವಿಸ್ ಹೆಡ್ (5) ಕ್ಲೀನ್ ಬೌಲ್ಡ್ ಮಾಡಿದ ಮೊಹಮ್ಮದ್ ಸಿರಾಜ್ ಗಮನ ಸಳೆದರು.ದ್ವಿತೀಯ ವಿಕೆಟ್ಗೆ ಮಿಚೆಲ್ ಮಾರ್ಷ್ ಹಾಗೂ ನಾಯಕ ಸ್ಟೀವ್ ಸ್ಮಿತ್ 72 ರನ್ಗಳ ಜೊತೆಯಾಟದಲ್ಲಿ ಭಾಗಿಯಾದರು. ಈ ಜೋಡಿಯನ್ನು ಹಾರ್ದಿಕ್ ಪಾಂಡ್ಯ ಬೇರ್ಪಡಿಸಿದರು. ಪರಿಣಾಮ 22 ರನ್ ಗಳಿಸಿದ ಆಸ್ಟ್ರೇಲಿಯಾ ಕಪ್ತಾನ ಸ್ಮಿತ್ ವಿಕೆಟ್ ಭಾರತದ ನಾಯಕ ಹಾರ್ದಿಕ್ ಪಾಲಾಯಿತು.
ಮತ್ತೊಂದೆಡೆ ಸ್ಫೋಟಕ ಬ್ಯಾಟಿಂಗ್ ಮಾಡಿದ ಮಾರ್ಷ್ ಅರ್ಧಶತಕ ಗಳಿಸಿದರು. ಅವರನ್ನು ರವೀಂದ್ರ ಜಡೇಜ ಔಟ್ ಮಾಡಿದರು. 65 ಎಸೆತಗಳನ್ನು ಎದುರಿಸಿದ ಮಾರ್ಷ್ 10 ಬೌಂಡರಿ ಹಾಗೂ ಐದು ಸಿಕ್ಸರ್ ನೆರವಿನಿಂದ 81 ರನ್ ಗಳಿಸಿದರು. ಮಾರ್ಷ್ ವಿಕೆಟ್ ಪತನದ ಬಳಿಕ ಆಸೀಸ್ ಬ್ಯಾಟರ್ಗಳು ಪರದಾಡಿದರು. ಮಾರ್ನಸ್ ಲಾಬುಶೇನ್ಗೆ (15) ಕುಲದೀಪ್ ಯಾದವ್ ಪೆವಿಲಿಯನ್ ಹಾದಿ ತೋರಿಸಿದರು.
ಆಸೀಸ್ ಕೊನೆಯ ಆರು ವಿಕೆಟ್ಗಳನ್ನು ಕೇವಲ 19 ರನ್ ಅಂತರದಲ್ಲಿ ಕಳೆದುಕೊಂಡಿತು. ಒಂದು ಹಂತದಲ್ಲಿ 27.4 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಆದರೆ 35.4 ಓವರ್ಗಳಲ್ಲಿ 188 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ಶಮಿ ಹಾಗೂ ಸಿರಾಜ್ ತಲಾ ಮೂರು ವಿಕೆಟ್ ಕಿತ್ತು ಮಿಂಚಿದರು. ರವೀಂದ್ರ ಜಡೇಜ ಎರಡು ಮತ್ತು ಕುಲದೀಪ್ ಯಾದವ್ ಒಂದು ವಿಕೆಟ್ ಗಳಿಸಿದರು.