ಸುಳ್ಯ:ಸುಳ್ಯದ 110 ಕೆವಿ ಸಬ್ ಸ್ಟೇಷನ್ ಕಾಮಗಾರಿ ನೆನೆಗುದಿಗೆ ಬಿದ್ದಿರುವುದಕ್ಕೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಸುಳ್ಯದಲ್ಲಿ ನಡೆದ ಮೆಸ್ಕಾಂ ಗ್ರಾಹಕರ ಜನ ಸಂಪರ್ಕ ಸಭೆಯಲ್ಲಿ ನಡೆದಿದೆ.ಸಭೆಯಲ್ಲಿ ಭಾಗಹಿಸಿದ ಹಲವರು 110 ಕೆವಿ ಸಬ್ ಸ್ಟೇಷನ್ ಕಾಮಗಾರಿ ವಿಳಂಬ ಆಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ.ಹಮೀದ್, ಮಾತನಾಡಿ 110 ಕೆ.ವಿ.ಸಬ್ ಸ್ಟೇಷನ್ ಆಗದಿದ್ದರೆ
ನಾವು ಸುಮ್ಮನೆ ಕುಳಿತುಕೊಳ್ಳವುದಿಲ್ಲ, ಇಲ್ಲಿಂದ ಚಿಕ್ಕ ಬಳ್ಳಾಪುರಕ್ಜೆ, ಕೋಲಾರಕ್ಕೆ ನೀರು ಕೊಂಡು ಹೋಗಲು ಸಾಧ್ಯವಿದೆ ಎಂದಾದರೆ ಪುತ್ತೂರಿನಿಂದ ಸುಳ್ಯಕ್ಕೆ ವಿದ್ಯುತ್ ಕಂಬ ಹಾಕಲು ಆಗುವುದಿಲ್ವಾ ಎಂದು ಪ್ರಶ್ನಿಸಿದರು. ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಇಚ್ಛಾಶಕ್ತಿ ಇಲ್ಲ, ಸರಿಯಾದ ಸಮಯಕ್ಕೆ ಕಾಮಗಾರಿ ಮುಗಿಸದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು. ಸುಳ್ಯ ಹಾಗೂ ಪುತ್ತೂರು ಶಾಸಕರುಗಳು ಕಾಮಗಾರಿ ಪೂರ್ತಿಗೆ ಆಸಕ್ತಿ ವಹಿಸಿ ಎಂದು ಅವರು ಆಗ್ರಹಿಸಿದರು.

ಆಲೆಟ್ಟಿ ಗ್ರಾ.ಪಂ.ಸದಸ್ಯ ಸತ್ಯಕುಮಾರ್ ಆಡಿಂಜ, ನಂದರಾಜ ಸಂಕೇಶ, ಎಸ್.ಕೆ.ಹನೀಫ, ರಶೀದ್ ಜಟ್ಟಿಪಳ್ಳ ದಿನೇಶ್ ಸರಸ್ವತಿ ಮಹಲ್ ಮತ್ತಿತರರು ಧ್ವನಿಗೂಡಿಸಿದರು.110 ಕೆವಿ ಸಬ್ ಸ್ಟೇಷನ್ ಕಾಮಗಾರಿ ವಿಳಂಬ ಅಗಿರುವುದಕ್ಕೆ ಸಭೆಯಲ್ಲಿ ಭಾಗವಹಿಸಿದ ಗ್ರಾಹಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಒಟ್ಟು 89 ಟವರ್ ನಿರ್ಮಾಣ ಆಗಬೇಕಾಗಿದ್ದು ಸುಳ್ಯ ತಾಲೂಕಿನಲ್ಲಿ 40, ಪುತ್ತೂರಿನಲ್ಲಿ 39, ಅರಣ್ಯದಲ್ಲಿ 10 ಟವರ್ ನಿರ್ಮಾಣ ಆಗಬೇಕಾಗಿದೆ. ಇದರಲ್ಲಿ ಕೇವಲ 10 ಟವರ್ನ ಫೌಂಡೇಶನ್ ಕೆಲಸ ಆಗಿದೆ. 5 ಟವರ್ ಫೌಂಡೇಷನ್ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು. ಸುಳ್ಯದಲ್ಲಿ 27 ಫೌಂಡೇಶನ್ ಟವರ್ ಕಾಮಗಾರಿಗೆ ಜಂಟಿ ಸಮೀಕ್ಷೆ ನಡೆಸಲಾಗಿದೆ ಎಂದು ಕೆಪಿಟಿಸಿಎಲ್ ಇಂಜಿನಿಯರ್ ಸಭೆಗೆ ಮಾಹಿತಿ ನೀಡಿದರು.












