ಬೆಂಗಳೂರು: ರಾಜ್ಯದ ಆರೋಗ್ಯ ಇಲಾಖೆಯ ನೂತನ 262 ಆ್ಯಂಬುಲೆನ್ಸ್ ಸೇವೆಗಳಿಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಧಾನಸೌಧದ ಆವರಣದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ 82.02 ಕೋಟಿ ರೂ. ವೆಚ್ಚದ ಹೊಸ 262 ಆಧುನಿಕ ಜೀವ ರಕ್ಷಕ ಆ್ಯಂಬುಲೆನ್ಸ್ ಗಳನ್ನು ಜನಸೇವೆಗಾಗಿ
ಲೋಕಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ಅವರು, ಗುಣಮಟ್ಟದ ಆರೋಗ್ಯ ಸೇವೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಸಿಗಬೇಕು ಎನ್ನುವುದು ನಮ್ಮ ಸರ್ಕಾರದ ಗುರಿ ಎಂದರು. ನಾಡಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ದವಾಗಿದೆ. ಚಿಕಿತ್ಸೆ ಸಿಗದೆ ಯಾರೂ ಪ್ರಾಣ ಕಳೆದುಕೊಳ್ಳುವಂಥಾಗಬಾರದು ಎನ್ನುವ ಕಾರಣಕ್ಕೇ ತುರ್ತು 108 ಆ್ಯಂಬುಲೆನ್ಸ್ ಗಳನ್ನು ಆರೋಗ್ಯ ಸೇವೆಗೆ ಒದಗಿಸಲಾಗಿದೆ. ರಾಜ್ಯದಲ್ಲಿ 840ಕ್ಕೂ ಹೆಚ್ಚು ಆ್ಯಂಬುಲೆನ್ಸ್ಗಳ ಅಗತ್ಯವಿದೆ. ಪ್ರತೀ ತಾಲ್ಲೂಕಿನಲ್ಲಿ 4 ಆ್ಯಂಬುಲೆನ್ಸ್ಗಳು ಕಾರ್ಯನಿರ್ವಹಿಸುತ್ತಾ ಪ್ರತೀ ದಿನ ನೂರಾರು ಮಂದಿಗೆ ತುರ್ತು ಆರೋಗ್ಯ ಸೇವೆ ಒದಗಿಸುತ್ತಿವೆ ಎಂದು ತಿಳಿಸಿದರು.
ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.